ನವದೆಹಲಿ: ಸರ್ಕಾರಿ ಉದ್ಯೋಗದ ನಕಲಿ ನೇಮಕಾತಿ ಪತ್ರಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ಆರು ರಾಜ್ಯಗಳ 15 ಸ್ಥಳಗಳಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಬಿಹಾರ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಗುಜರಾತ್ ಮತ್ತು ಉತ್ತರ ಪ್ರದೇಶದ ವಿವಿಧೆಡೆ ಇ.ಡಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೃತ್ಯದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿದ್ದೇವೆ. ಆರಂಭದಲ್ಲಿ ರೈಲ್ವೆ ಹೆಸರಿನಲ್ಲಿ ಹಗರಣ ನಡೆದಿರುವುದು ಪತ್ತೆಯಾಗಿತ್ತು. ಆದರೆ, ವಿಸ್ಕೃತ ತನಿಖೆ ಬಳಿಕ ಅರಣ್ಯ ಇಲಾಖೆ, ಆರ್‌ಆರ್‌ಬಿ (ರೈಲ್ವೆ ನೇಮಕಾತಿ ಮಂಡಳಿ), ಅಂಚೆ ಇಲಾಖೆ, ಆದಾಯ ತೆರಿಗೆ ಇಲಾಖೆ, ಕೆಲವು ಹೈಕೋರ್ಟ್‌ಗಳು, ಪಿಡಬ್ಲ್ಯೂಡಿ, ಬಿಹಾರ ಸರ್ಕಾರ, ದೆಹಲಿ ಅಭಿವೃದ್ಧಿ ಪ್ರಾಧಿಕಾರ, ರಾಜಸ್ಥಾನ ಸಚಿವಾಲಯ ಸೇರಿದಂತೆ ಇತರ 40ಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ಹಗರಣ ನಡೆದಿರುವುದು ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಆರೋಪಿಗಳು ಸರ್ಕಾರಿ ಇಲಾಖೆಗಳ ಇ-ಮೇಲ್ ಐಡಿಗಳಿಗೆ ಹೊಂದಾಣಿಕೆಯಾಗುವಂತೆ ನಕಲಿ ಐಡಿಗಳನ್ನು ಬಳಸಿ, ಉದ್ಯೋಗಾಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದರು. ಕೆಲವರಿಗೆ ನೇಮಕಾತಿ ಪತ್ರಗಳನ್ನು ಕಳುಹಿಸಿ 3 ತಿಂಗಳು ವೇತನವನ್ನು ನೀಡಿದ್ದರು ಎಂದು ಅವರು ಹೇಳಿದ್ದಾರೆ.
ಬಿಹಾರದ ಮುಜಾಫರ್‌ಪುರ, ಮೋತಿಹಾರಿ, ಪಶ್ಚಿಮ ಬಂಗಾಳದ ಕೋಲ್ಕತ್ತ, ಕೇರಳದ ಎರ್ನಾಕುಲಂ, ಪಂದಳಂ, ಅಡೂರ್, ಕೋಡೂರ್, ತಮಿಳುನಾಡಿನ ಚೆನ್ನೈ, ಗುಜರಾತ್‌ನ ರಾಜ್‌ಕೋಟ್, ಉತ್ತರ ಪ್ರದೇಶದ ಗೋರಖ್‌ಪುರ, ಪ್ರಯಾಗ್‌ರಾಜ್, ಲಖನೌದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

