ಕೋಲ್ಕತ್ತ: ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇನಾಲಯದ (ಇ.ಡಿ) ಅಧಿಕಾರಿಗಳು ಪಶ್ಚಿಮ ಬಂಗಾಳದ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ವಿಚಾರ ಆಡಳಿತರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಇ.ಡಿ ಅಧಿಕಾರಿಗಳು ಸಾಲ್ಟ್ ಲೇಕ್‌ನ 'ಗೋದ್ರೇಜ್ ವಾಟರ್‌ಸೈಡ್' ಕಟ್ಟಡದಲ್ಲಿರುವ ಐ-ಪ್ಯಾಕ್ ಸಂಸ್ಥೆಯ ಸಹ-ಸಂಸ್ಥಾಪಕರು ಆಗಿರುವ ಟಿಎಂಸಿಯ ಐಟಿ ಸೆಲ್ ಮುಖ್ಯಸ್ಥ ಪ್ರತೀಕ್ ಜೈನ್ ಅವರು ಕಚೇರಿ ಹಾಗೂ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜೈನ್ ನಿವಾಸಕ್ಕೆ ಧಾವಿಸಿದ್ದು, ಟಿಎಂಸಿಯ ದಾಖಲೆಗಳನ್ನು ಸಂಗ್ರಹಿಸುವ ಹುನ್ನಾರದ ಭಾಗವಾಗಿ ಕೇಂದ್ರ ಸರ್ಕಾರ ಈ ದಾಳಿ ನಡೆಸಿದೆ. ಇದು ಗೃಹ ಸಚಿವ ಅಮಿತ್ ಶಾ ಅವರು ಮಾಡಿರುವ ಅತ್ಯಂತ ದುರದೃಷ್ಟಕರ ಕೃತ್ಯವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
'ಇ.ಡಿ ದಾಳಿಯನ್ನು ಬೆದರಿಕೆಯ ಕೃತ್ಯ ಎಂದು ಕರೆದಿರುವ ಬ್ಯಾನರ್ಜಿ, 'ಜಾರಿ ನಿರ್ದೇನಾಲಯವು ಸಾಂವಿಧಾನಿಕ ಸಂಸ್ಥೆಯಾಗಿ ಉಳಿದಿಲ್ಲ. ಬದಲಾಗಿ, ರಾಜಕೀಯ ಸೇಡು ತಿರಿಸಿಕೊಳ್ಳುವ ಅಸ್ತ್ರವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶವನ್ನು ರಕ್ಷಣೆ ಮಾಡುವ ಬದಲು ಅತ್ಯಂತ ನೀಚ ಗೃಹ ಸಚಿವರಂತೆ ವರ್ತಿಸುತ್ತಿದ್ದಾರೆ' ಎಂದು ಗುಡುಗಿದ್ದಾರೆ.
ಇ.ಡಿ ದಾಳಿಯು ಕೇಂದ್ರ ಸರ್ಕಾರದ ರಾಜಕೀಯ ದ್ವೇಷದ ಕ್ರಮವಾಗಿದೆ. ಕೇಂದ್ರದ ತನಿಖಾ ಸಂಸ್ಥೆಗಳಳು ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಮತ್ತು ರಹಸ್ಯ ತಂತ್ರಗಾರಿಕೆಯ ದಾಖಲೆ ಕಳ್ಳತನ ಮಾಡಲು ಯತ್ನಿಸುತ್ತಿವೆ ಎಂದೂ ಅವರು ಆರೋಪಿಸಿದ್ದಾರೆ.
ಇ.ಡಿ ಅಧಿಕಾರಿಗಳು ನಮ್ಮ ಪಕ್ಷದ ಹಾರ್ಡ್ ಡಿಸ್ಕ್, ಆಂತರಿಕ ದಾಖಲೆಗಳು ಮತ್ತು ಸೂಕ್ಷ್ಮ ಡೇಟಾವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವುಗಳಲ್ಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ನಮ್ಮ ಅಭ್ಯರ್ಥಿಗಳ ವಿವರಗಳಿವೆ ಎಂದು ಅವರು ಹೇಳಿದ್ದಾರೆ.
ರಾಜಕೀಯ ಪಕ್ಷಗಳ ಐಟಿ ಮುಖ್ಯಸ್ಥರ ಮನೆಗಳ ಮೇಲೆ ದಾಳಿ ಮಾಡುವಂತೆ ನಿರ್ದೇಶನ ನೀಡುವುದೊಂದೇ ಅಮಿತ್ ಶಾ ಅವರ ಕೆಲಸವೇ ಎಂದು ಪ್ರಶ್ನಿಸಿದ ಅವರು, ಇದು ರಾಜಕೀಯ ಸೇಡು ಎಂದು ಕುಟುಕಿದ್ದಾರೆ.

