ಪೆರ್ಲ: ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ಸಿಪಿಐಎಂ ನೇತಾರ ಸುಧಾಕರ ತನ್ನ ಪಂಚಾಯತ್ ಸದಸ್ಯತ್ವಕ್ಕೆ ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಎಣ್ಮಕಜೆ ಪಂಚಾಯಿತಿಯ ಬಾಳೆಮೂಲೆ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆಯೊಂದಿಗೆ ಪ್ರತಿಭಟನೆ ನಡೆಯಿತು. ಬಿಜೆಪಿ ವಾರ್ಡ್ ಸಮಿತಿವತಿಯಿಂದ ಪ್ರತಿಭಟನೆ ಆಯೋಜಿಸಲಾಗಿತ್ತು.
ಬಾಳೆಮೂಲೆ ಟಿವಿ ಶೆಡ್ ಬಳಿಯಿಂದ ಬಾಳೆಮೂಲೆ ಶಾಲೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಪಂಚಾಯಿತಿ ಸದಸ್ಯತ್ವಕ್ಕೆ ರಾಜಿನಾಮೆ ನೀಡದಿದ್ದಲ್ಲಿ ಮುಂದೆ, ಸುಧಾಕರನ ಪಂಚಾಯಿತಿ ಪ್ರವೇಶಕ್ಕೆ ತಡೆಯೊಡ್ಡಿ ಕಪ್ಪು ಬಾವುಟ ಪ್ರದರ್ಶನದೊಂದಿಗೆ ಪ್ರಬಲ ಪ್ರತಿಭಟನೆಗೆ ಬಿಜೆಪಿ ಸನ್ನದ್ಧವಾಗಿದೆ ಎಂಬ ಎಚ್ಚರಿಕೆಯನ್ನು ನೀಡಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಮುರಳೀಧರ್ ಯಾದವ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಕೆಪಿ ಅನಿಲ್ ಕುಮಾರ್, ಬಿಜೆಪಿ ಮಂಡಲ ಜತೆಕಾರ್ಯದರ್ಶಿ ಸುಮಿತ್ ರಾಜ್,ಬಿಜೆಪಿ ಪಂಚಾಯಿತಿ ಸಮಿತಿ ಅಧ್ಯಕ್ಷ ರಮಾನಂದ ಭಟ್ ಎಡಮಲೆ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಭಟ್ ಪತ್ತಡ್ಕ, ಹಿಂದೂ ಸಂಘಟನೆಯ ಮುಖಂಡರಾದ ಅಕ್ಷಯ್ ರಜಪೂತ್ ಕಲ್ಲಡ್ಕ, ವಾರ್ಡ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.


