ಜೈಪುರ: ರಾಜಸ್ಥಾನದ ಜೈಪುರದಲ್ಲಿರುವ ಜೈಪುರ ಸೆಂಟ್ರಲ್ ಜೈಲು ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ರಾಷ್ಟ್ರದ ಗಮನ ಸೆಳೆದಿದೆ.
ಕೊಲೆ ಆರೋಪದ ಮೇಲೆ ಕಠಿಣ ಶಿಕ್ಷೆ ಅನುಭವಿಸುತ್ತಿರುವ ಎರಡು 'ಜೈಲು ಹಕ್ಕಿ'ಗಳ ನಡುವೆ ಪ್ರೇಮಾಂಕುರವಾಗಿ, ಆ ಪ್ರೇಮ ಇದೀಗ ಮದುವೆಗೆ ಬಂದು ನಿಂತಿದ್ದು, ಇವರಿಬ್ಬರ ಮದುವೆಗೆ ರಾಜಸ್ಥಾನ ಹೈಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾ ಪೆರೋಲ್ ಸಲಹಾ ಸಮಿತಿ 15 ದಿನಗಳ ಪೆರೋಲ್ ನೀಡಿದೆ.
ಡೇಟಿಂಗ್ ಆಯಪ್‌ನಲ್ಲಿ ಪರಿಚಯವಾಗಿದ್ದವನನ್ನು ಕೊಂದಿರುವ ಕೇಸಿನ (2023) ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಜೈಪುರದ 31 ವರ್ಷದ ಪ್ರಿಯಾ ಸೇಠ್ ಹಾಗೂ ಪತ್ನಿಯ ಅಕ್ರಮ ಸಂಬಂಧಕ್ಕೆ ರೊಚ್ಚಿಗೆದ್ದು ಮೂವರು ಮಕ್ಕಳೂ ಸೇರಿ ಐವರನ್ನು ಕೊಂದು (2017) ಜೈಲು ಸೇರಿರುವ ರಾಜಸ್ಥಾನದ ಅಲವರ್ ಎಂಬ ಊರಿನ 29 ವರ್ಷದ ಹನುಮಾನ್ ಪ್ರಸಾದ್ ನಡುವೆ ಮದುವೆ ನಡೆಯುತ್ತಿದೆ.
ಅಲವರ್‌ನಲ್ಲಿ ಇದೇ ಜನವರಿ 30 ರಂದು ಪ್ರಿಯಾ ಸೇಠ್ ಹಾಗೂ ಹನುಮಾನ್ ಪ್ರಸಾದ್ ಮದುವೆಯಾಗಲಿದ್ದಾರೆ.
ಹನುಮಾನ್ ಪ್ರಸಾದ್, ಪ್ರಿಯಾ ಸೇಠ್ ಅವರು ಜೈಪುರ ಸೆಂಟ್ರಲ್ ಜೈಲಿನಲ್ಲಿ ಸಂಪರ್ಕಕ್ಕೆ ಬಂದಿದ್ದರು. ಜೈಲಿನ ನಿಯಮಾವಳಿಗಳಂತೆ ಓಪನ್ ಜೈಲಿನ ಸೌಲಭ್ಯ ನೀಡಿದಾಗ ಕಳೆದ ಆರು ತಿಂಗಳಿನಿಂದ ಪ್ರಿಯಾ ಹಾಗೂ ಹನುಮಾನ್ ಆತ್ಮೀಯರಾಗಿದ್ದರು.
ಇವರಿಬ್ಬರ ಉತ್ತಮ ನಡವಳಿಕೆ ಹಾಗೂ ಕೈದಿಗಳ ಭವಿಷ್ಯದ ದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಜೈಲಿನ ನಿಯಮಾವಳಿಗಳಂತೆ ಇಬ್ಬರಿಗೂ ಮದುವೆ ಆಗಲು ಅನುಮತಿ ನೀಡಿದೆ. 15 ದಿನಗಳ ಬಳಿಕ ಜೈಲಿಗೆ ವಾಪಸ್ ಆಗಲಿದ್ದಾರೆ ಎಂದು ಜೈಲಿನ ಅಧೀಕ್ಷಕರು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವೆಬ್‌ಸೈಟ್ ವರದಿ ಮಾಡಿದೆ.
ಕೊಲೆ ಅಪರಾಧದ ಮೇಲೆ ಶಿಕ್ಷೆ ಅನುಭವಿಸುತ್ತಿರುವ ಜೈಲು ಹಕ್ಕಿಗಳಿಗೆ ಮದುವೆಯಾಗಲು ಪೆರೋಲ್ ನೀಡಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪೆರೋಲ್ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಸಂತ್ರಸ್ತರ ಕುಟುಂಬಗಳು ಮಾಧ್ಯಮಗಳ ಎದುರು ಹೇಳಿಕೊಂಡಿವೆ.
ಇನ್ನೂ ಕೆಲವರು ಪ್ರಿಯಾ ಸೇಠ್-ಹನುಮಾನ್ ಪ್ರಸಾದ್ ಹಾಗೂ ಅವರ 'ಪ್ರೇಮ ಕಹಾನಿ'ಯು ಒಂದೊಳ್ಳೆ ವೆಬ್ ಸಿರೀಸ್ ಆಗಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.
ಓಪನ್ ಜೈಲು ಎಂಬುದು ಕೈದಿಗಳಿಗೆ ಕೊಡುವ ಸೌಲಭ್ಯ. ಸಮಾನ ಮನಸ್ಕರರನ್ನು ಜೈಲಿನ ಆವರಣದಲ್ಲಿ ಮುಕ್ತವಾಗಿ ಬೆರೆಯಲು ಬಿಡುತ್ತಾರೆ.

