ಬದಿಯಡ್ಕ: ವಿದ್ಯಾಸಂಸ್ಥೆ ಎಂದರೆ ಕೇವಲ ಇಟ್ಟಿಗೆ ಮತ್ತು ಕಾಂಕ್ರೀಟಿನಿಂದ ನಿರ್ಮಿಸಿದ್ದ ಕಟ್ಟಡವಲ್ಲ. ಸಮಾಜದ ಪ್ರಗತಿ, ದೃಢತೆ, ಭವಿಷ್ಯದ ಆಶೋತ್ತರಗಳ ಪ್ರತೀಕ. ತಲೆಮಾರುಗಳ ಕನಸುಗಳಿಗೆ ಆಸರೆಯನ್ನು ನೀಡುವ ಜ್ಞಾನ ಮಂದಿರ ಎಂದು ತಲಶ್ಚೇರಿ ಮಹಾಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಹಿಸ್ ಗ್ರೇಸ್ ಮಾರ ಜೋಸೆಫ್ ಪಾಂಪ್ಲಾನಿ ಹೇಳಿದರು.
ಬದಿಯಡ್ಕ ಹೋಲಿ ಫ್ಯಾಮಿಲಿ ಕಾನ್ವೆಂಟ್ ವಿದ್ಯಾಲಯದಲ್ಲಿ ಸಿ. ಬಿ. ಎಸ್.ಇ ಅಂಗೀಕೃತ ಹಿರಿಯ ಪ್ರೌಢಶಾಲೆಯ ಪದೋನ್ನತಿ ಮತ್ತು ವಾರ್ಷಿಕೋತ್ಸವ ಸಮಾರಂಭವಾದ ಮ್ಯಾಗ್ನೋವ 2026 ಕಾರ್ಯಕ್ರಮವನ್ನು ಉದ್ಘಾಟಿಸಿ, ದಿವ್ಯ ಆಶೀರ್ವಚನವನ್ನು ನೀಡಿ ಅವರು ಮಾತನಾಡಿದರು.
ಈ ಸಂದರ್ಭವು ನಮ್ಮ ಶಾಲೆಯ ಇತಿಹಾಸದಲ್ಲಿನ ಅತ್ಯಂತ ಪವಿತ್ರ ಕ್ಷಣವಾಗಿದೆ. ಇದು ಕೇವಲ ಶಾಲಾ ಆವರಣವಲ್ಲ. ಇದು ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಮತ್ತು ನಿರ್ವಹಣೆಯ ಕನಸುಗಳು, ಪ್ರಾರ್ಥನೆಗಳು ಮತ್ತು ಪರಿಶ್ರಮಗಳಿಂದ ನಿರ್ಮಿತವಾದ ವಿದ್ಯಾ ಮಂದಿರವಾಗಿದೆ. ಈ ಸ್ಥಳವು ಜ್ಞಾನ, ಶಿಸ್ತು, ಸೃಜನಶೀಲತೆ ಮತ್ತು ಮೌಲ್ಯಗಳ ಕೇಂದ್ರವಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ನುಡಿದರು.
ಸಿ.ಎಚ್.ಎಫ್. ಮರಿಯನ್ ಪ್ರಾಂತ್ಯದ ಪ್ರಾಂತೀಯ ಅಧೀಕ್ಷಕಿ ರೆವ್. ಸಿಸ್ಟರ್ ವಲ್ಸಾ ತೆರೆಸ್, ಬದಿಯಡ್ಕದ ಸಂತ ಮೇರಿ ಇಗರ್ಜಿಯ ವಿಕಾರ್ ರೆವ್. ಫಾದರ್ ಚಾಕೋ ಕುಡಿಪರಂಬಿಲ್ ಅವರು ಹೊಸ ಕಟ್ಟಡದ ಆಶೀರ್ವಚನಗಳನ್ನು ಸಲ್ಲಿಸಿ ಸಮರ್ಪಣೆ ನೆರವೇರಿಸಿದರು. ಹೋಲಿ ಫ್ಯಾಮಿಲಿ ವಿದ್ಯಾಸಂಸ್ಥೆಯು ಜಾತಿಮತ ಭೇದವಿಲ್ಲದೆ ಎಲ್ಲ ಮಕ್ಕಳಿಗೂ ಶಿಕ್ಷಣವನ್ನು ನೀಡುತ್ತಿದೆ. ದೂರದೃಷ್ಟಿ ಮತ್ತು ಪ್ರಗತಿಪರ ಮನೋಧರ್ಮವನ್ನು ಹೊಂದಿರುವ ಪ್ರಾಂಶುಪಾಲರು ಶಾಲೆಯ ಮೂಲಸೌಕರ್ಯ ಮತ್ತು ಅಭಿವೃದ್ಧಿಗೆ ಒತ್ತು ಕೊಟ್ಟಿದ್ದಾರೆ ಎಂದು ವಲ್ಸ ತೆರೆಸ್ ಅಭಿಪ್ರಾಯಪಟ್ಟರು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ. ಶಂಕರ, ಕಾಸರಗೋಡು ಸಹೋದಯ ಕಾರ್ಯದರ್ಶಿ ಜಸ್ಟಿನ್ ಆಂಟನಿ, ಬದಿಯಡ್ಕ ಗ್ರಾಮಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ಹಮೀದ್ ಕೆಡೆಂಜಿ, ಅವಿನಾಶ್ ರೈ ವಿ., ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ, ಆಡಳಿತ ಮಂಡಳಿಯ ಮಾಹಿನ್ ಕೇಳೋಟ್ ಮತ್ತು ಸಮುದಾಯದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

.jpeg)
