ಪೆರ್ಲ: ದೇಹಕ್ಕೆ ಗುಂಡು ತಗಲಿ ಸೇರಾಜೆ ನಿವಾಸಿಯಾದ ಬಾಲಕ ಸಾವಿಗೀಡಾದ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಸೇರಾಜೆ ನಿವಾಸಿ ವಸಂತಪೂಜಾರಿಯ ಪುತ್ರ ಮೋಕ್ಷಿತ್ (17) ಕಳೆದ ಶನಿವಾರ ಸಂಜೆ ಉಪ್ಪಿನಂಗಡಿ ಬಳಿಯ ರಾಮಕುಂಜದಲ್ಲಿರುವ ಮನೆಯಲ್ಲಿ ಗುಂಡು ತಗಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಇದೇ ವೇಳೆ ತಂದೆ ವಸಂತ ಪೂಜಾರಿ ಇರಿತದಿಂದ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ವಸಂತ ಪೂಜಾರಿಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿ ಸಿದ್ದು, ಅವರಿಗೆ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ತಂದೆ ವಸಂತರಿಗೆ ಇರಿದು ಗಾಯಗೊಳಿಸಿದ ಬಳಿಕ ಮೋಕ್ಷಿತ್ ಸ್ವತಃ ಗುಂಡು ಹಾರಿಸಿ ಕೊಂಡಿರುವುದಾಗಿ ಮೊದಲು ಹೇಳಲಾಗಿತ್ತು. ಆದರೆ ಬಾಲಕನ ತಾಯಿ ಜಯಶ್ರೀ ನೀಡಿದ ದೂರಿನ ಹಿನ್ನೆಲೆಯಲ್ಲಿ ಇಡೀ ನಾಡನ್ನೇ ಬೆಚ್ಚಿ ಬೀಳಿಸಿದ ಘಟನೆ ಹೊಸ ತಿರುವಿನತ್ತ ಸಾಗಿದೆ. ಮಗನನ್ನು ಕೊಲೆಗೈದ ಬಳಿಕ ಪತಿ ಸ್ವಯಂ ಇರಿದು ಗಾಯಗೊಳಿಸಿ ಕೊಂಡಿರಬಹುದು ಎಂದು ಜಯಶ್ರೀ ಆರೋಪಿಸಿರುವುದಾಗಿ ಹೇಳಲಾಗುತ್ತಿದೆ. ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಉಂಟಾದುದರಿಂದ ತಾನು ಹಾಗೂ ಪುತ್ರ ಎಣ್ಮಕಜೆ ಸೇರಾಜೆ ಬಳಿಯ ಮನೆಯಲ್ಲಿ ವಾಸಿಸುತ್ತಿರುವುದಾಗಿಯೂ ಒಂದು ತಿಂಗಳ ಹಿಂದೆ ಮಗನನ್ನು ಪತಿ ರಾಮಕುಂಜಕ್ಕೆ ಕರೆದುಕೊಂಡು ಹೋಗಿರುವುದಾಗಿ ಜಯಶ್ರೀ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. ವಸಂತ ಪೂಜಾರಿ ಕೆಲವು ವರ್ಷಗಳಿಂದ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಸ್ಥಳ ಖರೀದಿಸಿ ಅಲ್ಲಿ ಮನೆ ನಿರ್ಮಿಸಿ ವಾಸವಾಗಿದ್ದರು. ಮೋಕ್ಷಿತ್ ಮಂಗಳೂರಿನ ಕಾಲೇಜೊಂದರಲ್ಲಿ ಶಿಕ್ಷಣ ಪಡೆಯುತ್ತಿದ್ದನು. ಈತನ ಮೃತದೇಹವನ್ನು ಹುಟ್ಟೂರಾದ ಎಣ್ಮಕಜೆಯ ತರವಾಡು ಮನೆಗೆ ತಲುಪಿಸಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಈ ವೇಳೆ ಭಾರೀ ಸಂಖ್ಯೆಯಲ್ಲಿ ಸಂಬಂಧಿಕರು, ನಾಗರಿಕರ ಸಹಿತ ತಲುಪಿ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ ಮೋಕ್ಷಿತ್‌ನಿಗೆ ಹೇಗೆ ಗುಂಡು ತಗಲಿದೆ ಎಂದು ಇನ್ನಷ್ಟೇ ತಿಳಿಯಬೇ ಕಾಗಿದೆ ಎಂದು ಹೇಳಲಾಗುತ್ತಿದೆ. ಬಾಲಕನಿಗೆ ಗುಂಡು ತಗಲಿದ ಬಂದೂಕನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಬಂದೂಕು ಯಾರದ್ದೆಂಬ ಬಗ್ಗೆ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

