ಉಪ್ಪಳ: ಮನೆ ಬಳಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ಗಂಭೀರಾವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ. ಮೂಲತಃ ಕೊಚ್ಚಿ ಆಲುವಾ ನಿವಾಸಿ, ಕಳೆದ 20 ವರ್ಷಗಳಿಂದ ಪೈವಳಿಕೆಯ ಮರಿಕೆಯಲ್ಲಿ ವಾಸವಾಗಿರುವ ಬಾಬು ಕೆ.ಯು (46) ಮೃತಪಟ್ಟಿದ್ದಾರೆ. ಇವರು ಈ ಹಿಂದೆ ಟೈಲ್ಸ್ ಹಾಸುವ ಕೆಲಸವನ್ನು ನಿರ್ವಹಿಸುತ್ತಿದ್ದು, ಬಳಿಕ ಪೈವಳಿಕೆ ಪಂಚಾಯತ್‌ನ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾರ್ಮಿಕರಾಗಿದ್ದರು. ಈ ತಿಂಗಳ ೧೯ರಂದು ಸಂಜೆ ಪತ್ನಿ ಸುಂದರಿ ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದಾಗ ಮನೆಯಲ್ಲಿ ಬಾಬು ಕಂಡುಬಂದಿರಲಿಲ್ಲ. ಬಳಿಕ ಹುಡುಕಾಡಿದಾಗ ಮನೆ ಬಳಿಯ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಸ್ಥಳೀಯರ ಸಹಾಯದಿಂದ ಹಗ್ಗವನ್ನು ಕಳಚಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲಿಂದ ಶನಿವಾರ ಸಂಜೆ ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ರಾತ್ರಿ ಸುಮಾರು ೯ ಗಂಟೆಗೆ ಮೃತಪಟ್ಟಿದ್ದಾರೆ. ಪಂಚಾಯತ್‌ನಿಂದ ನೀಡಿದ ಹೊಸ ಮನೆಯ ಗೃಹ ಪ್ರವೇಶ ಎರಡು ತಿಂಗಳ ಹಿಂದೆ ನಡೆದಿತ್ತು. ಮನೆ ನಿರ್ಮಾಣದ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೆಂದು ಸಂಬಂಧಿಕರು ತಿಳಿಸಿದ್ದಾರೆ. ಮಂಜೇಶ್ವರ ಪೊಲೀಸರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮನೆ ಪರಿಸರದಲ್ಲಿ ಅಂತ್ಯಸಂಸ್ಕಾರ ನಡೆಯಿತು.
ಮೃತರು ತಾಯಿ , ಪತ್ನಿ, ಏಕ ಪುತ್ರಿ ತಮಿಷ, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

