ಕಾಸರಗೋಡು: ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿಯಲ್ಲಿ ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ಶೋಚನೀಯಾವಸ್ಥೆ ಪರಿಹರಿಸುವಂತೆ ಆಗ್ರಹಿಸಿ ಖಾಸಗಿ ಬಸ್ ಕಾರ್ಮಿಕರು ಮತ್ತು ಮಾಲಿಕರು ಅನಿರ್ಧಿಷ್ಟಾವಧಿ ಮುಷ್ಕರಕ್ಕಿಳಿದಿದ್ದಾರೆ. ತಕ್ಷಣ ದುರಸ್ತಿಕಾರ್ಯ ಕೈಗೊಳ್ಳದಿದ್ದಲ್ಲಿ ಜ. 19ರಿಂದ ಬಸ್‍ಗಳನ್ನು ರಸ್ತೆಗಿಳಿಸದೆ ಮುಷ್ಕರ ನಡೆಸುವುದಾಗಿ ಈಗಾಗಲೇ ಘೋಷಿಸಿದ್ದಾರೆ.
ಚೆರ್ಕಳದಿಂದ ಉಕ್ಕಿನಡ್ಕ ಹಾಗೂ ಅಲ್ಲಿಂದ ಮುಂದಕ್ಕೆ ಅಡ್ಕಸ್ಥಳ ವರೆಗೆ ಎರಡು ಪ್ರತ್ಯೇಕ ಟೆಂಡರ್ ಮೂಲಕ ಈ ಹಿಂದೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದ್ದು, ಇದರಲ್ಲಿ ಉಕ್ಕಿನಡ್ಕದಿಂದ ಅಡ್ಕಸ್ಥಳ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದರೂ, ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ಕಾಮಗಾರಿಯನ್ನು ಪೂರ್ತಿಗೊಳಿಸದೆ ಗುತ್ತಿಗೆದಾರರು ಅರ್ಧಕ್ಕೆ ಕೈಬಿಟ್ಟಿದ್ದರು. ನಡೆಸಿದ ಕಾಮಗಾರಿಯೂ ಕಳಪೆ ಎಂಬ ದೂರು ವ್ಯಾಪಕಗೊಂಡಿತ್ತು. ಶಿಥಿಲಗೊಂಡ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದ್ದು, ಈ ಬಗ್ಗೆ ಲೋಕೋಪಯೋಗಿ ಇಲಾಖೆ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ.
ಪಳ್ಳತ್ತಡ್ಕದಲ್ಲಿ ರಸ್ತೆ ಹೆಚ್ಚು ಶಿಥಿಲಾವಸ್ಥೆಯಲ್ಲಿದ್ದು, ಸುಮಾರು 200ಮೀಟರ್ ವರೆಗೆ ರಸ್ತೆ ಸಂಪೂರ್ಣ ಮಾಯವಾಗಿದ್ದು, ಭಾರೀ ಹೊಂಡ ನಿರ್ಮಾಣವಾಗಿದೆ. ಉಳಿದಂತೆ ಬಹುತೇಕ ಕಡೆ ರಸ್ತೆಯಲ್ಲಿ ಹೊಂಡ ನಿರ್ಮಾಣಗೊಂಡಿದ್ದು, ಪ್ರಯಾಣಿಕರು ಮತ್ತು ಚಾಲಕರ ಪಾಲಿಗೆ ಭಾರೀ ಸಮಸ್ಯೆ ಎದುರಾಗುತ್ತಿದೆ. ಬಹುತೇಕ ಕಡೆ ರಸ್ತೆ ಹೊಂಡಗಳನ್ನು ತಪ್ಪಿಸಲು ವಾಹನಗಳು ವಿರುದ್ಧ ದಿಕ್ಕಿನಿಂದ ಸಂಚರಿಸುತ್ತಿದ್ದು, ಎದುರಿನಿಂದ ಆಗಮಿಸುವ ವಾಹನಗಳ ಚಾಲಕರೂ ಗೊಂದಲಕ್ಕೀಡಾಗುತ್ತಿದ್ದಾರೆ. ದ್ವಿಚಕ್ರ, ಆಟೋ ರಿಕ್ಷಾಗಳ ಪಾಲಿಗೆ ಅಂತಾರಾಜ್ಯ ಸಂಪರ್ಕದ ಚೆರ್ಕಳ-ಕಲ್ಲಡ್ಕ ರಸ್ತೆ ಮರಣಗುಂಡಿಗಳಾಗಿ ಪರಿಣಮಿಸಿದೆ. ಇನ್ನು ರಸ್ತೆ ಅಂಚಿಗೆ ಬೆಳೆದಿರುವ ಕುರುಚಲು ಕಾಡು ಶುಚೀಕರಿಸದೆ ರಸ್ತೆ ಸರಿಯಾಗಿ ಗೋಚರಿಸದೆ ಅಪಾಯ ಎದುರಾಗುತ್ತಿದೆ.
ರಸ್ತೆ ಶೀಥಿಲಾವಸ್ಥೆಯಿಂದ ಬೈಕ್‍ಗಳು ಪಲ್ಟಿಯಾಗುವುದು, ಬಸ್ಸಿನೊಳಗೆ ಪ್ರಯಾಣಿಕರು ಎಡವಿಬಿದ್ದು ಗಾಯಗೊಳ್ಳುತ್ತಿರುವುದು ಸಾಮಾನ್ಯವಾಗುತ್ತಿದೆ. ಚೆರ್ಕಳ-ಕಲ್ಲಡ್ಕ ರಸ್ತೆ ನಿರ್ವಹಣೆ ಪ್ರಸಕ್ತ 'ಕಿಫ್‍ಬಿ' ವಿಭಾಗದಲ್ಲಿದ್ದು, ಕಳೆದ ಐದಾರು ತಿಂಗಳಿಂದ ರಸ್ತೆ ಅಭಿವೃದ್ಧಿ ಶೀಘ್ರ ನಡೆಸಲಾಗುವುದು ಎಂಬ ಭರವಸೆ ನೀಡುತ್ತಿರುವುದು ಬಿಟ್ಟರೆ, ಕಾಮಗಾರಿ ಇದುವರೆಗೆ ಆರಂಭಿಸಿಲ್ಲ. ಮಳೆಗಾಲದಲ್ಲಿ ಪಳ್ಳತ್ತಡ್ಕದಲ್ಲಿ ಕೆರೆಯಂತಾಗುವ ರಸ್ತೆಯ ಶೋಚನೀಯಾವಸ್ಥೆ ಬಗ್ಗೆ ಈ ಹಿಂದಿನ ಗ್ರಾಪಂ ಸದಸ್ಯ ಹಮೀದ್ ಪಳ್ಳತ್ತಡ್ಕ ನೇತೃತ್ವದಲ್ಲಿ ಊರವರ ಸಹಕಾರದೊಂದಿಗೆ ಭಾರಿ ಪ್ರತಿಭಟನೆಯನ್ನೂ ನಡೆಸಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.
ಅಭಿಮತ:
ರಸ್ತೆ ಶೋಚನೀಯಾವಸ್ಥೆಯಿಂದ ಬಸ್ ಮಾಳಿಕರಿಗೆ, ನೌಕರರಿಗೆ ಹಗೂ ಪ್ರಯಾಣಿಕರಿಗೆ ನಿತ್ಯ ಸಂಕಷ್ಟ ಎದುರಾಗುತ್ತಿದೆ. ಇಲಾಖೆಯ ಪೊಳ್ಳು ಭರವಸೆಯಿಂದ ಬೇಸತ್ತು ಕೊನೆಗೂ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗುತ್ತಿದ್ದೇವೆ.
ಹಾರಿಸ್ ಪಿಎಂಎಸ್
'ಪ್ರೈಡ್' ಕಾರ್ಮಿಕರ ಯೂನಿಯನ್ ವಲಯ ಅಧ್ಯಕ್ಷ



