HEALTH TIPS

ಪ್ರತಿಭಟನಕಾರರ ವಿರುದ್ಧ ಮೃದು ಧೋರಣೆಯಿಲ್ಲ: ಗಲ್ಲು ಶಿಕ್ಷೆಗೆ ಇರಾನ್‌ ಉತ್ಸುಕತೆ

ದುಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಎಚ್ಚರಿಕೆಯ ನಡುವೆಯೂ, ಬಂಧಿತ ಪ್ರತಿಭಟನಕಾರರ ವಿರುದ್ಧ ತ್ವರಿತವಾಗಿ ವಿಚಾರಣೆ ನಡೆಸಿ, ಮರಣ ದಂಡನೆ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇರಾನ್‌ನ ನ್ಯಾಯಾಂಗ ಮುಖ್ಯಸ್ಥ ಘೋಲಮ್‌ ಹೊಸೇನ್‌ ಮೊಹ್ಸೇನಿ- ಎಜೇಯಿ ಬುಧವಾರ ಸುಳಿವು ನೀಡಿದ್ದಾರೆ.

ಇಸ್ಲಾಮಿಕ್‌ ಗಣರಾಜ್ಯ ಇರಾನ್‌ನಲ್ಲಿ ಆಡಳಿತ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ 2,572 ಮಂದಿ ಪ್ರತಿಭಟನಕಾರರು ಮೃತಪಟ್ಟಿದ್ದಾರೆ, ಅಲ್ಲದೆ 10,000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂಬ ಮಾಹಿತಿಯಿದೆ. ಇರಾನ್‌ನಲ್ಲಿ ದಶಕಗಳಲ್ಲಿ ನಡೆದ ಯಾವುದೇ ಪ್ರತಿಭಟನೆ, ಅಶಾಂತಿ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾವು, ನೋವು ಸಂಭವಿಸಿರಲಿಲ್ಲ ಎನ್ನಲಾಗಿದೆ.

'ಪ್ರತಿಭಟನಕಾರರ ವಿರುದ್ಧ ಮರಣದಂಡನೆಯಂತಹ ಕ್ರಮಗಳನ್ನು ತೆಗೆದುಕೊಂಡರೆ, ಅಮೆರಿಕ ಬಲವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ ಎಚ್ಚರಿಕೆಯ ಬೆನ್ನಲ್ಲೇ ಘೋಲಮ್‌ ಅವರು ತಿರುಗೇಟು ನೀಡಿದ್ದಾರೆ.

'ನಾವು ಏನನ್ನಾದರೂ ಮಾಡಬಯಸಿದರೆ, ಈಗಲೇ ಮಾಡಬೇಕು. ಅದಕ್ಕಾಗಿ ಎರಡು, ಮೂರು ತಿಂಗಳು ಕಾದರೆ, ಅದರ ಪರಿಣಾಮಗಳು ಬೇರೆಯೇ ಆಗಬಹುದು. ಅದಕ್ಕೆಲ್ಲ ಅವಕಾಶ ನೀಡದೆ, ತ್ವರಿತವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ಘೋಲಮ್‌ ಹೇಳಿದ್ದಾರೆ. ಅವರ ಈ ಹೇಳಿಕೆ ಇರಾನ್‌ನ ಸರ್ಕಾರಿ ವಾಹಿನಿಯಲ್ಲಿ ಪ್ರಸಾರವಾಗಿದೆ.

ಗುಡುಗಿದ ಟ್ರಂಪ್‌:

ಇರಾನ್‌ನಲ್ಲಿ ಜನರ ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವ ಇರಾನ್‌ ಆಡಳಿತದ ವಿರುದ್ಧ ಟ್ರಂಪ್‌ ಕಟುವಾಗಿ ಮಾತನಾಡಿದ್ದಾರೆ. ಪ್ರತಿಭಟನಕಾರರ ಸಾವಿನ ಸಂಖ್ಯೆಯ ಕುರಿತು ಮಾಹಿತಿ ತಿಳಿದ ಕೂಡಲೇ, ಅವರು ಇರಾನ್‌ ಜತೆಗಿನ ಎಲ್ಲ ಮಾತುಕತೆಗಳನ್ನು ಕಡಿತಗೊಳಿಸಿದ್ದಾರೆ. ಜತೆಗೆ ಪ್ರತಿಭಟನಕಾರರಿಗೆ ಮರಣದಂಡನೆ ವಿಧಿಸಿದರೆ, ಅದಕ್ಕೆ ಅನುಗುಣವಾಗಿ ತಾನೂ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.

ಇರಾನ್‌ ತ್ಯಜಿಸುತ್ತಿರುವ ವಿದೇಶಿ ವಿದ್ಯಾರ್ಥಿಗಳು:

ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ದೇಶ ತೊರೆಯಲು ಇರಾನ್‌ನ ವಿಶ್ವವಿದ್ಯಾಲಯಗಳು ಅನುಮತಿ ನೀಡಿವೆ ಮತ್ತು ಪರೀಕ್ಷೆಗಳನ್ನು ಮರು ನಿಗದಿಪಡಿಸಿವೆ ಎಂದು ಇರಾನ್‌ನ ಪಾಕಿಸ್ತಾನದ ರಾಯಭಾರಿ ಮುದಾಸೀರ್‌ ಟಿಪ್ಪು ತಿಳಿಸಿದ್ದಾರೆ.

ಇರಾನ್‌ನಲ್ಲಿ ಕಲಿಯುತ್ತಿರುವ ಪಾಕಿಸ್ತಾನದ ಡಜನ್‌ಗಟ್ಟಲೆ ವಿದ್ಯಾರ್ಥಿಗಳು ನೈರುತ್ಯ ಗಡಿ ದಾಟುವ ಮೂಲಕ ಮನೆಗೆ ಮರಳಿದ್ದಾರೆ ಎಂದು ಪಾಕಿಸ್ತಾನಿ ವಲಸೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

‌ಉಚಿತ ಇಂಟರ್‌ನೆಟ್‌ ಸೇವೆ ಆರಂಭ:

ಉಪಗ್ರಹದ ಮೂಲಕ ಇಂಟರ್‌ನೆಟ್‌ ಪೂರೈಸುವ ಸ್ಟಾರ್‌ಲಿಂಕ್‌, ತನ್ನ ಕಂಪನಿಯ ರಿಸೀವರ್‌ಗಳನ್ನು ಹೊಂದಿರುವ ಇರಾನ್‌ ಜನರಿಗೆ ಉಚಿತ ಇಂಟರ್‌ನೆಟ್‌ ಸೇವೆ ಆರಂಭಿಸಿದೆ.

ಜನವರಿ 8ರಿಂದ ದೇಶದಲ್ಲಿ ಇರಾನ್‌ ಸರ್ಕಾರ ದೇಶದಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಿದೆ. ಇದೀಗ ಸ್ಟಾರ್‌ಲಿಂಕ್‌ ಮೂಲಕ ಇಂಟರ್‌ನೆಟ್‌ ಸಂಪರ್ಕ ಸಾಧ್ಯವಾಗಿದೆ. ಇದರ ನೆರವಿನಿಂದ ಇರಾನ್‌ನ ಹಲವರು ತಮ್ಮ ಮೊಬೈಲ್‌ ಫೋನ್‌ಗಳ ಮೂಲಕ ಅಂತರರಾಷ್ಟ್ರೀಯ ಕರೆಗಳನ್ನು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries