ಕೋಲ್ಕತ್ತ: ಇಬ್ಬರು ಶುಶ್ರೂಷಣಾ ಅಧಿಕಾರಿಗಳಿಗೆ ನಿಫಾ ವೈರಸ್ ಸೋಂಕು ದೃಢಪಟ್ಟಿದ್ದು, ಅವರನ್ನು ಕೋಲ್ಕತ್ತದ ಬೆಲಿಯಾಘಾಟ್ ಐಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಸೋಂಕು ಇರುವುದು ಸೋಮವಾರ ದೃಢಪಟ್ಟಿದ್ದು, ಒಬ್ಬರನ್ನು ಮಂಗಳವಾರ ರಾತ್ರಿ, ಮತ್ತೊಬ್ಬರನ್ನು ಬುಧವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರ ಆರೋಗ್ಯ ಚಿಂತಾಜನಕವಾಗಿದೆ. ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿದ್ದಾರೆ. ಐಸಿಸಿಯುನಲ್ಲಿ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸೋಂಕಿತ ಶುಶ್ರೂಷಣಾ ಅಧಿಕಾರಿಯೊಂದಿಗೆ ಸಂಪರ್ಕ ಹೊಂದಿದ್ದ ಬರಾಸತ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಗೆ (ಆರ್‌ಎಂಒ) ಕೂಡ ನಿಫಾ ವೈರಸ್ ಲಕ್ಷಣಗಳು ಕಾಣಿಸಿಕೊಂಡಿವೆ. ಪಶ್ಚಿಮ ಬಂಗಾಳದ ಕಲ್ಯಾಣಿಯಲ್ಲಿರುವ ಏಮ್ಸ್ ಐಸಿಎಂಆರ್‌ನ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಸೋಂಕು ದೃಢಪಟ್ಟಿಲ್ಲ. ಆದರೂ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಬ್ಬ ಶುಶ್ರೂಷಣಾ ಅಧಿಕಾರಿ ಪೂರ್ವ ಬರ್ಧಮಾನ್ ಜಿಲ್ಲೆಯ ಕಟ್ವಾದಿಂದ ಹಿಂದಿರುಗಿದ್ದರು. ಅಲ್ಲಿಯೇ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಮತ್ತೊಬ್ಬರು ಭಾರತ-ಬಾಂಗ್ಲಾದೇಶ ಗಡಿ ಸಮೀಪದ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಘುಗ್ರಗಾಚಿಗೆ ಪ್ರಯಾಣಿಸಿದ್ದರು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

