ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಗುವಾಹಟಿಯ ಬಳಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿಯಾಗಿ ಏಳು ಆನೆಗಳು ಮೃತಪಟ್ಟ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
ಘಟನೆ ಬಗ್ಗೆ ಮಾಡಲಾದ ಪತ್ರಿಕಾ ವರದಿಯ ಪ್ರಕಾರ ನ್ಯಾಯಮಂಡಳಿಯು ಸ್ವಯಂ ಪ್ರೇರಿತವಾಗಿ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದೆ.
ನ್ಯಾಯಮಂಡಳಿಯು ಜನವರಿ 5ರಂದು ಹೊರಡಿಸಲಾದ ತನ್ನ ಆದೇಶದಲ್ಲಿ, 'ಮೇಲ್ನೋಟಕ್ಕೆ ಸುದ್ದಿಯಲ್ಲಿ ಉಲ್ಲೇಖಿಸಲಾದ ಸಂಗತಿಗಳು ಮತ್ತು ಸಂದರ್ಭಗಳು ಪರಿಸರಕ್ಕೆ ಸಂಬಂಧಿಸಿದ ಗಣನೀಯ ಪ್ರಶ್ನೆಗಳನ್ನು ಹುಟ್ಟುಹಾಕಿವೆ...' ಎಂದು ಹೇಳಿದೆ.
ಜಮುನಾಮುಖ್-ಕಾಮಪುರ ವಿಭಾಗದಲ್ಲಿ ಸಂಭವಿಸಿದ ಅಪಘಾತದಿಂದಾಗಿ ಸೈರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ನ ಎಂಜಿನ್ ಮತ್ತು ಐದು ಬೋಗಿಗಳು ಹಳಿತಪ್ಪಿವೆ ಎಂದು ವರದಿಯು ಹೇಳಿದೆ.
ನ್ಯಾಯಮಂಡಳಿಯು ಸಿಪಿಸಿಬಿ, ಅಸ್ಸಾಂ ಸರ್ಕಾರದ ಪರಿಸರ ವಿಶೇಷ ಮುಖ್ಯ ಕಾರ್ಯದರ್ಶಿ, ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅಸ್ಸಾಂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಪ್ರತಿವಾದಿಗಳನ್ನಾಗಿ ಸೇರಿಸಿಕೊಂಡು, ನೋಟಿಸ್ ಜಾರಿ ಮಾಡಿದೆ.
ಜನವರಿ 28ರಂದು ಕೋಲ್ಕತ್ತದಲ್ಲಿರುವ ನ್ಯಾಯಮಂಡಳಿಯ ಪೂರ್ವ ವಲಯ ಪೀಠದ ಮುಂದೆ ಈ ವಿಷಯವನ್ನು ಪಟ್ಟಿ ಮಾಡುವಂತೆ ಅದು ನಿರ್ದೇಶಿಸಿದೆ.

