ತಿರುವನಂತಪುರಂ: ಮಲಯಾಳಂ ಭಾಷಾ ಮಸೂದೆಯ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ. ಮಸೂದೆ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು,
ಮಲಯಾಳಂ ಅನ್ನು ಯಾರ ಮೇಲೂ ಹೇರಲಾಗುವುದಿಲ್ಲ, ಅಥವಾ ಭಾಷಾ ಸ್ವಾತಂತ್ರ್ಯವನ್ನು ಅಳಿಸುವುದಿಲ್ಲ ಎಂದವರು ನಿನ್ನೆ ಪ್ರತಿಕ್ರಿಯಿಸಿದರು. ಇದು ಕಾಸರಗೋಡು ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಸಂಬಂಧ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎತ್ತಿದ ಟೀಕೆಗೆ ಪ್ರತಿಕ್ರಿಯೆಯಾಗಿತ್ತು.
ಕನ್ನಡ ಮತ್ತು ತಮಿಳು ಮಾತನಾಡುವ ಅಲ್ಪಸಂಖ್ಯಾತರು ಅಧಿಕೃತ ಉದ್ದೇಶಗಳಿಗಾಗಿ ತಮ್ಮ ಮಾತೃಭಾಷೆಯನ್ನು ಬಳಸಲು ಯಾವುದೇ ಅಡ್ಡಿಯಿಲ್ಲ ಮತ್ತು ಕೇರಳವು ಎಲ್ಲರೂ ಕೆಲಸ ಮಾಡಬಹುದಾದ ರಾಜ್ಯವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
‘ಮಲಯಾಳಂ ಭಾಷಾ ಮಸೂದೆ 2025’ ಕುರಿತು ಕೇರಳ ಮತ್ತು ಕರ್ನಾಟಕದ ನಡುವಿನ ವಿವಾದ ತೀವ್ರಗೊಂಡಿದೆ. ಕಾಸರಗೋಡು ಸೇರಿದಂತೆ ಗಡಿ ಜಿಲ್ಲೆಗಳ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕರ್ನಾಟಕ ಕಳವಳ ವ್ಯಕ್ತಪಡಿಸಿದೆ.

