ಕಾಸರಗೋಡು: ಕೇರಳ ಮುಸ್ಲಿಂ ಜಮಾಅತ್ ವತಿಯಿಂದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಕೇರಳ ಯಾತ್ರೆಗೆ ಗುರುವಾರ ಕಾಸರಗೋಡಿನ ಚೆಂಗಳದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಸೆಂಟಿನರಿಯ ಅಂಗವಾಗಿ ಹಮ್ಮಿಕೊಂಡಿರುವ ಕೇರಳ ಯಾತ್ರೆ ಕೇರಳ ಮುಸ್ಲಿಂ ಜಮಾಅತ್ ಅಧ್ಯಕ್ಷ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವ ನೀಡುತ್ತಿದ್ದಾರೆ.
ಸಯ್ಯಿದ್ ಅಲಿ ಬಾಫಕಿ ತಂಙಳ್ ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು. ಸಯ್ಯದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಲ್ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಸಮಾರಂಭ ಉದ್ಘಾಟಿಸಿದರು. ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಂ. ರಾಜಗೋಪಾಲನ್, ಎನ್.ಎ. ನೆಲ್ಲಿಕುನ್ನು, ಸಿ.ಎಚ್. ಕುಞಂಬು, ಇ. ಚಂದ್ರಶೇಖರನ್, ಎ.ಕೆ.ಎಂ. ಅಶ್ರಫ್, ಚಿನ್ಮಯ ಮಿಷನ್ ಕೇರಳ ಘಟಕದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ, ಫಾದರ್ ಮ್ಯಾಥ್ಯೂ ಬೇಬಿ ಮಾರ್ತೋಮ, ಎಂ. ಅಬ್ದುಲ್ ರಹಿಮಾನ್, ಪಿ.ಕೆ. ಫೈಸಲ್, ಹಕೀಂ ಕುನ್ನಿಲ್, ಹರ್ಷಾದ್ ವರ್ಕಾಡಿ, ಅಜೀಜ್ ಕಡಪ್ಪುರಂ ಮೊದಲಾದವರು ಉಪಸ್ಥಿತರಿದ್ದರು. ಸಿ. ಮುಹಮ್ಮದ್ ಫೈಝಿ, ರಹಮತುಲ್ಲಾ ಸಖಾಫಿ ಎಳಮರಂ ವಿಷಯ ಮಂಡಿಸಿದರು. ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಸ್ವಾಗತಿಸಿದರು. ಕಾಟಿಪ್ಪಾರ ಅಬ್ದುಲ್ ಖಾದಿರ್ ಸಖಾಫಿ ವಂದಿಸಿದರು.
'ಮನುಷ್ಯರೊಂದಿಗೆ' ಎಂಬ ಸಂದೇಶದೊಂದಿಗೆ ಕೇರಳ ಮುಸ್ಲಿಂ ಜಮಾಅತ್ ನೇತೃತ್ವದಲ್ಲಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ನಡೆಸುತ್ತಿರುವ ಈ ಕೇರಳ ಯಾತ್ರೆಗೆ ಉಳ್ಳಾಲದಲ್ಲಿ ಭವ್ಯ ಚಾಲನೆ ನೀಡಿದ ನಂತರ ತಲಪ್ಪಾಡಿ ಮೂಲಕ ಯತ್ರೆ ಕೇರಳ ಪ್ರವೇಶಿಸಿತ್ತು. ನೂರಾರು ಸುನ್ನಿ ಕಾರ್ಯಕರ್ತರ ತಕ್ಬೀರ್ ಧ್ವನಿಗಳ ನಡುವೆ ಉಳ್ಳಾಲ ದರ್ಗಾದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಮತ್ತು ಯಾತ್ರಾ ಸಮಿತಿಯ ಅಧ್ಯಕ್ಷ ಕೆ.ಎಸ್. ಆಟಕ್ಕೋಯ ತಂಙಳ್ ಅವರು ಯಾತ್ರಾ ನಾಯಕ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರಿಗೆ ಧ್ವಜ ಹಸ್ತಾಂತರಿಸಿದರು.
ಉಪನಾಯಕರಾದ ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ, ಪೇರೋಡ್ ಅಬ್ದುರಹಮಾನ್ ಸಖಾಫಿ, ಕರ್ನಾಟಕ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಉಳ್ಳಾಲ್, ಡಾ. ಮುಹಮ್ಮದ್ ಫಾಝಿಲ್ ಮೊದಲಾದವರು ಉಪಸ್ಥಿತರಿದ್ದರು.



