ಕಾಸರಗೋಡು: ಪುಲ್ಲೂರ್ ಪೆರಿಯ ಗ್ರಾಮ ಪಂಚಾಯಿತಿಯ ಕುಟುಂಬಶ್ರೀ ಸಿಡಿಎಸ್ ಮಾರ್ಕೆಟಿಂಗ್ ವಿಭಾಗದ ವತಿಯಿಂದ ನಿರ್ಮಿಸಲಾದ ಕಿರು ಮಾರಾಟ ಮಳಿಗೆ(ಕಿಯೋಸ್ಕ್)ಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಡಾ. ಸಿ.ಕೆ. ಸಬಿತಾ ಉದ್ಘಾಟಿಸಿದರು.
ಕುಟುಂಬಶ್ರೀ ಕಿರು ಉದ್ದಿಮೆದಾರರು ತಯಾರಿಸಿದ ಗುಣಮಟ್ಟದ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡುವುದು, ಗ್ರಾಹಕರಿಗೆ ಕುಟುಂಬಶ್ರೀ ಉತ್ಪನ್ನಗಳ ಸ್ಥಿರ ಲಭ್ಯತೆಯನ್ನು ಖಚಿತಪಡಿಸುವುದು ಮತ್ತು ಉದ್ಯಮಗಳ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಿಯೋಸ್ಕ್ ಆರಂಭಿಸಲಾಗಿದೆ.
ಮೊದಲ ಮಾರಾಟವನ್ನು ವಾರ್ಡ್ ಸದಸ್ಯೆ ಎನ್. ಉಷಾ ನೆರವೇರಿಸಿದರು. ಕುಟುಂಬಶ್ರೀ ಎಡಿಎಂಸಿ ಡಿ.ಹರಿದಾಸ್, ಸಿ.ಎಚ್. ಇಕ್ಬಾಲ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎ. ಶಫಿ, ದೀಪಾ ಮಣಿಕಂಠನ್, ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಸದಸ್ಯೆ ಸಿಂಧು ಪದ್ಮನಾಭನ್, ಪಂಚಾಯಿತಿ ಸದಸ್ಯರಾದ ಕೆ.ಬಿಂದು, ಕೆ.ಲೀಲಾ, ಎಂ.ರೇಖಾ, ಕೆ.ಸುನೀತಾ, ವಿ.ಕೆ. ನಳಿನಿ, ಸಿ. ಶೋಭನ, ಸಿಡಿಎಸ್ ಸದಸ್ಯರು, ಎಂಇಸಿ ಆನಿಮೇಟರ್‍ಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿಪ್ರಮುಖ ಪ್ರವಾಸಿ ತಾಣಗಳು, ವ್ಯಾಪಾರಕ್ಕೆ ಅವಕಾಶವಿರುವ ಪ್ರದೇಶಗಳು ಮತ್ತು ಜಿಲ್ಲೆಗಳ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಕಿಯೋಸ್ಕ್‍ಗಳನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲಾ ಮಿಷನ್ ಸ್ಥಳಗಳನ್ನು ಆಯ್ಕೆ ಮಾಡುವುದು, ಉದ್ಯಮಿಗಳಿಗೆ ಅಗತ್ಯ ತರಬೇತಿ ನೀಡುವುದು ಮತ್ತು ಜಿಲ್ಲಾ ಮಟ್ಟದ ಪ್ರಚಾರ ಚಟುವಟಿಕೆ ಬಲಪಡಿಸುವುದು ಯೋಜನೆ ಉದ್ದೇಶವಾಗಿದೆ.
ಕಿಯೋಸ್ಕ್‍ಗಳನ್ನು ಸ್ಥಾಪಿಸುವ ಜವಾಬ್ದಾರಿ ಮತ್ತು ಮಾಲೀಕತ್ವವು ಆಯಾ ಜಿಲ್ಲಾ ಮಿಷನ್‍ಗಳದ್ದಾಗಿದ್ದು, ಕಿಯೋಸ್ಕ್‍ಗಳನ್ನು ನಡೆಸುವ ಜವಾಬ್ದಾರಿಯನ್ನು ಸಿಡಿಎಸ್‍ಗೆ ನೀಡಲಾಗುವುದು. ಉತ್ಪಾದನಾ ಸಾಮಥ್ರ್ಯ ಮತ್ತು ಗುಣಮಟ್ಟ ಹೆಚ್ಚಿಸುವ ಗುರಿ ಮತ್ತು 'ಕುಡುಂಬಶ್ರೀ ಏಕೀಕೃತ ಚಿಲ್ಲರೆ ಸರಪಳಿ' ಪರಿಕಲ್ಪನೆಯೊಂದಿಗೆ ಯೋಜನೆ ಕಾರ್ಯಗತಗೊಳಿಸಲಾಗಿದೆ.



