ಶಬರಿಮಲೆ: ಮಕರ ಬೆಳಕು ಮಹೋತ್ಸವಕ್ಕೆ ಸಂಬಂಧಿಸಿದಂತೆ ಸನ್ನಿಧಾನದಲ್ಲಿ ನಡೆಯುತ್ತಿರುವ ಮಂಡಲ ರಚನಾ ಕಾರ್ಯ ಜ. 18ರಂದು ಸಂಪನ್ನಗೊಳ್ಳಲಿದೆ. ಮಕರ ಸಂಕ್ರಮಣದಿಂದ ಐದು ದಿನಗಳ ಕಾಲ ಮಾಲಿಗಪುರತ್ತಮ್ಮ ಮಣಿಮಂಟಪದಲ್ಲಿ ಮಂಡಲರಚನೆಯ ಮೂಲಕ ಅಯ್ಯಪ್ಪನ ಬಾಲ್ಯ, ಹದಿಹರೆಯದ, ಯೌವನ, ಕ್ರಿಯಾದಿ ಪೂರೈಕೆ ಮತ್ತು ಧರ್ಮಶಾಸ್ತ್ರನಾಗಿ ರೂಪುಗೊಳ್ಳುವ ವರೆಗಿನ ಚಿತ್ರಣವನ್ನು ರಚಿಸಲಾಗುತ್ತದೆ. ಮೊದಲ ದಿನ ಬಾಲಮಣಿಕಂಠ ವೇಷಂ, ನಂತರ ಬಿಲ್ಲುಬಾಣ ವೀರ ರಾಜಕುಮಾರ, ಹುಲಿವಹನಧಾರಿಯಾಗಿ ಮುಕ್ತಾಯಗೊಳ್ಳುತ್ತದೆ. 18 ರಂದು ಪವಿತ್ರಾಭರಣದೊಂದಿಗೆ ಅಲಂಕರಿಸಲ್ಪಟ್ಟ ಧರ್ಮಶಾಸ್ತ್ರನನ್ನುಮಂಡಲದಲ್ಲಿರಚಿಸಲಾಗುತ್ತದೆ.
ಪಂದಳಂ ಅರಮನೆಯಿಂದ ಪೂರೈಸುವ ನೈಸರ್ಗಿಕ ಬಣ್ಣದೊಂದಿಗೆ ಈ ಮಂಡಲರಚಿಸಲಾಗುತ್ತದೆ. ಅರಿಶಿನ, ಜೀರಿಗೆ, ಅರಿಶಿನ ಪುಡಿ, ಸಿಂಧೂರ ಮತ್ತು ಸುಣ್ಣ ಮಂಡಲಕ್ಕಾಗಿ ಬಳಸುವ ಪ್ರಮುಖ ಬಣ್ಣಗಳಾಗಿದೆ.
ಶನಿವಾರ ಸನ್ನಿಧಾನದಲ್ಲಿ ಪವಿತ್ರ ಮೆಟ್ಟಿಲುಪೂಜೆ ನೆರವೇರಿತು. ತಂತ್ರಿ ಕಂಠರರ್ ಮಹೇಶ್ ಮೋಹನರ್ ನೇತೃತ್ವದಲ್ಲಿ ಪೂಜಾ ಕಾರ್ಯಖ್ರಮ ನಡೆಯಿತು. ಜ. 18ರಂದು ಪಂದಳ ಅರಮನೆ ವತಿಯಿಂದ ಕಳಭಾಭಿಷೇಕ ನಡೆಯಲಿದ್ದು, 19ರ ವರೆಗೆ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 20ರಂದು ಬೆಳಗ್ಗೆ 6ಕ್ಕೆ ಗರ್ಭಗುಡಿ ಬಾಗಲು ಮುಚ್ಚಿದ ನಂತರ ಪವಿತ್ರ ಆಭರಣದೊಂದಿಗೆ ರಾಜಪ್ರತಿನಿಧಿ ಹದಿನೆಂಟು ಮೆಟ್ಟಿಲು ಇಳಿದು ಪಂದಳ ಅರಮನೆಗೆ ತೆರಳಲಿದ್ದಾರೆ.



