ಸತಾರಾ ಜಿಲ್ಲೆಯ ಪಾರ್ಲಿಯ ಪ್ರಮೋದ್ ಜಾಧವ್ ಅವರು ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ ಗರ್ಭಿಣಿಯಾಗಿದ್ದ ಕಾರಣ ಪಿತೃತ್ವ ರಜೆ ಪಡೆದು ಹುಟ್ಟೂರಿಗೆ ಆಗಮಿಸಿದ್ದರು.
ಪ್ರಮೋದ್ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಡೀ ಕುಟುಂಬ ಮಗುವಿನ ನಿರೀಕ್ಷೆಯಲ್ಲಿ ಸಂಭ್ರಮಿಸುತ್ತಿತ್ತು. ಆದರೆ ವಿಧಿ ಬರಹ ಬೇರೆಯೇ ಆಗಿತ್ತು. ಸಂತಸವನ್ನು ಆಚರಿಸಬೇಕಿದ್ದ ಕುಟುಂಬ ಈಗ ದುಃಖ ಮಡುವಿನಲ್ಲಿ ತೇಲುವಂತಾಗಿದೆ. ಅದಕ್ಕೆ ಕಾರಣ ಪ್ರಮೋದ್ ಅವರ ಸಾವು.
ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸಿದ ನಂತರ ಪ್ರಮೋದ್ ಜಾಧವ್ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದಾಗ ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದಾದ ಕೆಲವು ಗಂಟೆಗಳಲ್ಲಿ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಯೋಧನಿಗೆ ವಿದಾಯ ಹೇಳಲು ಅವರ ಪತ್ನಿಯನ್ನು ಆಸ್ಪತ್ರೆಯಿಂದ ಸ್ಟ್ರೆಚರ್‌ನಲ್ಲಿ ಕರೆತರಲಾಗಿತ್ತು. ಎಂಟು ಗಂಟೆಗಳ ಹಿಂದೆ ಜನಿಸಿದ ಮಗುವಿನೊಂದಿಗೆ ಪತಿಯ ಮೃತದೇಹವನ್ನು ನೋಡಲು ಆಗಮಿಸಿದ ದೃಶ್ಯ ನಿಜಕ್ಕೂ ಹೃದಯ ಕಲಕುವಂತಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಯೋಧನ ದುರಂತ ಸಾವಿಗೆ ಸಂತಾಪ ವ್ಯಕ್ತವಾಗುತ್ತಿದೆ.

