ಪೆರ್ಲ: ಪೆರ್ಲ ಸನಿಹದ ಬೆದ್ರಂಪಳ್ಳ ನಡುಬೈಲಿನಲ್ಲಿ ಆಯತಪ್ಪಿ ಕೆರೆಗೆ ಬಿದ್ದ ಹದಿನೇಳರ ಹರೆಯದ ಬಾಲಕಿಯನ್ನು ಸ್ಥಳೀಯ ನಿವಾಸಿಗಳು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಿತ್ತಿಲಲ್ಲಿನ ವೀಳ್ಯದೆಲೆ ಕೀಳಲು ತೆರಳುವ ಮಧ್ಯೆ ಆಯತಪ್ಪಿ ಕೆರೆಗೆ ಬಿದ್ದಿದ್ದಳು. ಈ ಸಂದರ್ಭ ಬಾಲಕಿ ಬೊಬ್ಬಿಡುತ್ತಿದ್ದಂತೆ ಆಸುಪಾಸಿನವರು ಆಗಮಿಸಿ ನೀರಿಗೆ ಬಿದ್ದ ಬಾಲಕಿಗೆ ಹಗ್ಗವೊಂದನ್ನು ನೀಡಿ, ಹಿಡಿದು ನಿಲ್ಲುವಂತೆ ಮಾಡಿದ್ದು, ನಂತರ ಇಬ್ಬರು ಕೆರೆಗೆ ಇಳಿದು ಮುಳುಗದಂತೆ ಆಸರೆಯಾಗಿದ್ದರು. ನಂತರ ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬಾಲಕಿಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

