ಮಂಜೇಶ್ವರ: ಮಹಿಳೆಯೊಂದಿಗೆ ಯುವಕನ ಅರೆನಗ್ನ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಪಡಿಸುವ ಬೆದರಿಕೆಯೊಡ್ಡಿ, ಅವರಿಂದ ಹಣ ಹಾಗೂ ಮೊಬೈಲ್ ಅಪಹರಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಬಡಾಜೆ ಕಾಜೂರ್ ಮಾಲಿ ನಿವಾಸಿ ಟಿ.ಕೆ ಮಹಮ್ಮದ್ ಫೈಸಲ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೀರಾರ್‍ಮೂಲೆ ನಿವಾಸಿ ಹಾಗೂ ಕಡಂಬಾರಿನಲ್ಲಿ ವಸಿಸುತ್ತಿರುವ ಕೆ.ಎ ಹಾರಿಸ್ ಎಂಬಾತನನ್ನು ಈ ಹಿಂದೆ ಬಂಧಿಸಲಾಗಿತ್ತು.
ಜ. 14ರಂದು ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಂಗಡಿಯಲ್ಲಿ ಘಟನೆ ನಡೆದಿದ್ದು, ಉಳ್ಳಾಲ ಮೋಂಟುಗುಳಿ ನಿವಾಸಿ ಮಹಮ್ಮದ್ ಹನೀಫ್ ತನ್ನ ಸ್ನೇಹಿತೆಯಾಗಿರುವ ಮಹಿಳೆಯೊಂದಿಗೆ ಮಂಜೇಶ್ವರದಲ್ಲಿ ಕೊಠಡಿ ಪಡೆದಿದ್ದು, ಈ ಸಂದರ್ಭ ಏಕಾಏಕಿ ನುಗ್ಗಿದ ತಂಡ, ಜೋಡಿಯನ್ನು ಮಂಚದಲ್ಲಿ ಕುಳ್ಳಿರಿಸಿ ಅರೆನಗ್ನ ಫೋಟೋ ತೆಗೆದು, 2ಲಕ್ಷ ರೂ.ಗಾಗಿ ಬೇಡಿಕೆಯಿರಿಸಿತ್ತು. ಹಣವಿಲ್ಲವೆಂದು ತಿಳಿಸಿದಾಗ ಕೈಯಲ್ಲಿದ್ದ 5ಸಾವಿರ ರೂ. ನಗದು ಹಾಗೂ ಮೊಬೈಲ್ ಕಸಿದು ತಂಡ ಪರಾರಿಯಾಗಿರುವ ಬಗ್ಗೆ ಮೂರು ಮಂದಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.


