ಮುಂಬೈ: ಇಂದು ಬುಧವಾರ (ಜ.28) ಮಹಾರಾಷ್ಟ್ರದ ಬಾರಾಮತಿ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೆ ಇಂತಹ ವಿಮಾನ, ಹೆಲಿಕಾಪ್ಟರ್‌ಗಳ ಅಪಘಾತದಿಂದ ಯಾರೆಲ್ಲ ಬದುಕುಳಿದಿದ್ದಾರೆ.
ಇಂಥಹ ದುರಂತಗಳಾದಾಗ ಸಾವಿನ ಅಂಚಿನಿಂದ ಪಾರಾದ ರಾಜಕಾರಣಿಗಳ ಕುರಿತು ಹುಡುಕಾಟ ನಡೆದಿದೆ. ಈ ಲೇಖನದಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್ ಅಪಘಾತಗಳಿಂದ ಬದುಕುಳಿದ ರಾಜಕಾರಣಿಗಳ ಪಟ್ಟಿ ಹಾಗೂ ವಿವರ ನೀಡಲಾಗಿದೆ.
ವಾಯುಯಾನ ವೇಳೆ ಅವಘಡಗಳು ಸಂಭವಿಸಿದರೆ ಬದುಕುಳಿಯುವುದು ತೀರಾ ಕಷ್ಟ. ಏಕೆಂದರೆ ಸ್ಪೋಟದ ತೀವ್ರತೆ ಹೆಚ್ಚಿರುತ್ತದೆ. ಬೆಂಕಿಯ ಕೆನ್ನಾಲಿಗೆ ದಿಢೀರನೇ ಆವರಿಸುವ ಕಾರಣ ಪ್ರಯಾಣಿಕರು ಬುದಕುಳಿಯುವ ಅವಕಾಶಗಳು ಕಡಿಮೆ ಇರುತ್ತದೆ. ಅಂಥದರಲ್ಲಿ ಸಾವಿನ ದವಡೆಯಿಂದ ಪಾರಾದ 07 ರಾಜಕಾರಣಿಗಳು ಯಾರು? ವರ್ಷ, ಅಪಘಾತದ ಮಾಹಿತಿ ಇಲ್ಲಿದೆ.
ರಾಜಕಾರಣಿಗಳು ರಾಜಕೀಯ ಕಾರಣಕ್ಕೆ ನಿತ್ಯ ಬೇರೆ ಬೇರೆ ಕಡೆಗೆ ತೆರಳಲು ಹೆಚ್ಚಾಗಿ ವಿಶೇಷ/ಖಾಸಗಿ ವಿಮಾನ, ಹೆಲಿಕಾಪ್ಟರ್‌ಗಳನ್ನು ಬಳಸುತ್ತಾರೆ. ಕೆಲವು ಬಾರಿ ತಾಂತ್ರಿಕ ಕಾರಣ ಹಾಗೂ ಇನ್ನಾವುದೋ ಕಾರಣಕ್ಕೆ ಇಂಥಹ ಅನಿರೀಕ್ಷಿತ ದುರಂತಗಳೂ ಸಂಭವಿಸಿ ಬಿಡುತ್ತವೆ.
ಬದುಕುಳಿದ ಅದೃಷ್ಟವಂತ ರಾಜಕಾರಣಿಗಳು
ದಿವಂಗತ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ವಿಮಾನ ಅಪಘಾತವಾದಾಗ ಬದುಕುಳಿದವರಲ್ಲಿ ಒಬ್ಬರು. 1977 ಅವರು ಚಲಿಸುತ್ತಿದ್ದ ವಿಮಾನ ಅಸ್ಸಾಂನಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ ಅದೃಷ್ಟವಶಾತ್ ಅವರು ಬದುಕುಳಿದಿದ್ದರು.
ಗುಜರಾತ್‌ನಲ್ಲಿ 2004ರಲ್ಲಿ ಘಟಿಸಿದ್ದ ಭೀಕರ ವಿಮಾನ ಅಪಘಾತದಲ್ಲಿ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್, ಆವತ್ತಿಗೆ ಕೇಂದ್ರ ಸಚಿವರಾಗಿದ್ದ ಪೃಥ್ವಿರಾಜ್ ಚವಾಣ್, ಕುಮಾರಿ ಸೆಲ್ಜಾ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಸಾವಿನ ಗಳಿಗೆ ಕಂಡ ಕ್ಷಣಗಳನ್ನು ಅವರು ನೆನೆದಿದ್ದರು.
ಪಂಜಾಬ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್ ಹಾಗೂ ಸಚಿವ ಪ್ರತಾಪ್ ಸಿಂಗ್ ಬಾಜ್ವಾ ಅವರು ಬದುಕುಳಿದ ರಾಜಕಾರಣಿಗಳಲ್ಲಿ ಪ್ರಮುಖರು. 2005ರಲ್ಲಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವಾಗ ಆ ಹೆಲಿಕಾಪ್ಟರ್ ಎಲೆಕ್ಟ್ರಿಕ್ ವೈಯರ್‌ಗೆ ಸ್ಪರ್ಶಿಸಿ ಅಪಘಾತ ಉಂಟಾಗಿತ್ತು. ಈ ವೇಳೆ ಸಿಎಂ ಹಾಗೂ ಸಚಿವರು ಪವಾಡ ಸದೃಶ್ಯದಂತೆ ಪಾರಾಗಿದ್ದರು.
ಪಂಜಾಬ್ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಸುಖ್ವಿಂದರ್ ಸಿಂಗ್ ಬಾದಲ್ ಅವರಿದ್ದ ಹೆಲಿಕಾಪ್ಟರ್ ಫಿರೋಜ್‌ಪುರದಲ್ಲಿ ಆಗಸ್ಟ್ 30ರಂದು ತಾಂತ್ರಿಕ ಕಾರಣಗಳಿಂದ ತುರ್ತು ಭೂಸ್ವರ್ಶವಾಗಿತ್ತು. ಯಾವುದೇ ಗಾಯಗಳು ಇಲ್ಲದೇ ಅವರು ಬದುಕುಳಿದಿದ್ದರು. ಭೂಸ್ಪರ್ಶ ಕೊಂಚ ತಡವಾಗಿದ್ದರು ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇತ್ತು.
ಇನ್ನೂ ಹಾಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಮುಖ್ತಾರ್ ಅಬ್ಬಾಸ್ ನಖ್ವಿ ಈ ಇಬ್ಬರು ನಾಯಕರು ಕಳೆದ ವರ್ಷ 2025ರಲ್ಲಿ ರಾಮಪುರದಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದರು. ಈ ವೇಳೆ ಅವರಿದ್ದ ವಿಮಾನವು ಅಪಘಾತಕ್ಕೀಡಾಯಿತು. ಈ ವೇಳೆ ಅವರು ಬದುಕುಳಿದರು.
ರಾಜಸ್ಥಾನದಲ್ಲಿ 2011ರಲ್ಲಿ ಮುಖ್ಯಮಂತ್ರಿಯಾಗಿದ್ದ ಅಶೋಕ್ ಗೆಹಲೋತ್ ಅವರಿದ್ದ ಹೆಲಿಕಾಪ್ಟರ್ ಅಂದು ಚುರು ಜಿಲ್ಲೆಯಲ್ಲಿ ಪತನಗೊಂಡಿತ್ತು. ಈ ವೇಳೆ ಸಿಎಂ ಪ್ರಾಣಕ್ಕೆ ಯಾವುದೇ ಹಾನಿ ಆಗದೇ ಬುದುಕುಳಿದಿದ್ದರು. ಸಣ್ಣಪುಟ್ಟ ಗಾಯಗಳು ಆಗಿದ್ದವು. ಇನ್ನೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ಹಿಂದೆ ಎರಡು ಮೂರು ಬಾರಿ ವಿಮಾನ ಅಪಘಾತಗಳಿಂದ ಪಾರಾಗಿದ್ದಾರೆ.
ಜನವರಿ 28ರಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿದ್ದ ವಿಮಾನ ಅಪಘಾತವಾಗಿ ಅಜಿತ್ ಪವಾರ್ ಜೊತೆಗೆ ಪಿಎಸ್‌ಐ ಜಾಧವ್, ಓರ್ವ ಸಹಾಯಕ, ಇಬ್ಬರು ಪೈಲಟ್‌ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಖಾಸಗಿ ವಿಮಾನದಲ್ಲಿ ತೆರಳುವಾಗ ಬಾರಾಮತಿ ಬಳಿ ಅಪಘಾತ ಸಂಭವಿಸಿದೆ. ಡಿಸಿಎಂ ಸೇರಿ ಐವರು ಮೃತಪಟ್ಟಿದ್ದಾಗ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ದೃಢಪಡಿಸಿದೆ.
ವಾಯುಯಾನ ಅವಘಡ: ಬದುಕುಳಿದ ರಾಜಕಾರಣಿಗಳ ಸಂಕ್ಷಿಪ್ತ ಮಾಹಿತಿ
1. ಮೊರಾರ್ಜಿ ದೇಸಾಯಿ (1977)
2. ಅಹ್ಮದ್ ಪಟೇಲ್, ಪೃಥ್ವಿರಾಜ್ ಚವಾಣ್, ಕುಮಾರಿ ಸೆಲ್ಜಾ (2004)
3. ಅಮರಿಂದರ್ ಸಿಂಗ್, ಪರತಾಪ್ ಸಿಂಗ್ ಬಾಜ್ವಾ (2005)
4. ಸುಖ್ವಿಂದರ್ ಸಿಂಗ್ ಬಾದಲ್
5. ರಾಜನಾಥ್ ಸಿಂಗ್, ಮುಖ್ತಾರ್ ಅಬ್ಬಾಸ್ ನಖ್ವಿ
6. ಅಶೋಕ್ ಗೆಹ್ಲೋಟ್
7. ದೇವೇಂದ್ರ ಫಡ್ನವಿಸ್

