ಇಸ್ಲಾಮಾಬಾದ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಗಾಜಾ ಶಾಂತಿ ಮಂಡಳಿ ಸೇರಲು ಪಾಕಿಸ್ತಾನದ ಫೆಡರಲ್ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಖೈಬರ್ ಪಖ್ತುಂಖ್ವಾ (KPK assembly) ಪ್ರಾಂತ್ಯದ ವಿಧಾನಸಭೆಯು ಸರ್ವಾನುಮತದಿಂದ ತಿರಸ್ಕರಿಸಿದೆ.
ಸೋಮವಾರ ನಡೆದ ಅಧಿವೇಶನದಲ್ಲಿ ಈ ಕುರಿತಾದ ಮಹತ್ವದ ನಿರ್ಣಯವನ್ನು ಅಂಗೀಕರಿಸುವ ಮೂಲಕ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧ ಕೆಪಿಕೆ ಅಸೆಂಬ್ಲಿ ನೇರ ಸಮರ ಸಾರಿದೆ.
ನಿರ್ಣಯದ ಹಿನ್ನೆಲೆ ಮತ್ತು ವಿರೋಧ
ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ (WEF) ಸಭೆಯ ಸಂದರ್ಭದಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಟ್ರಂಪ್ ಅವರ ಈ ಮಂಡಳಿಯ ಚಾರ್ಟರ್‌ಗೆ ಸಹಿ ಹಾಕಿದ್ದರು. ಆದರೆ, ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಆಡಳಿತದಲ್ಲಿರುವ ಕೆಪಿಕೆ ಪ್ರಾಂತ್ಯವು ಇದನ್ನು ತೀವ್ರವಾಗಿ ಖಂಡಿಸಿದೆ.
ನಿರ್ಣಯ ಮಂಡನೆ
ಕೆಪಿಕೆ ಕಾನೂನು ಸಚಿವ ಆಫ್ತಾಬ್ ಆಲಂ ಅವರು ಈ ನಿರ್ಣಯವನ್ನು ಮಂಡಿಸಿದ್ದು, ಇದಕ್ಕೆ ಜಮಿಯತ್ ಉಲೆಮಾ-ಎ-ಇಸ್ಲಾಂ ಸೇರಿದಂತೆ ಹಲವು ಪಕ್ಷಗಳು ಬೆಂಬಲ ಸೂಚಿಸಿವೆ.
ಆಕ್ಷೇಪಣೆ
ಈ ಶಾಂತಿ ಮಂಡಳಿಯು ಪ್ಯಾಲೆಸ್ಟೈನಿಯನ್ನರ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಇದು ಅಮೆರಿಕ ಹಾಗೂ ಇಸ್ರೇಲ್‌ನ ಅಜೆಂಡಾವನ್ನು ಜಾರಿಗೆ ತರುವ ಒಂದು ವೇದಿಕೆಯಾಗಿದೆ ಎಂದು ನಿರ್ಣಯದಲ್ಲಿ ದೂರಲಾಗಿದೆ.
ಟ್ರಂಪ್ ಶಾಂತಿ ಮಂಡಳಿಯ ಸುತ್ತ ವಿವಾದ
ಡೊನಾಲ್ಡ್ ಟ್ರಂಪ್ರು ಗಾಜಾ ಮರುನಿರ್ಮಾಣ ಮತ್ತು ಜಾಗತಿಕ ಸಂಘರ್ಷಗಳ ಪರಿಹಾರಕ್ಕಾಗಿ ಈ ಮಂಡಳಿಯನ್ನು ಸ್ಥಾಪಿಸಿದ್ದಾರೆ. ಆದರೆ, ಇದರಲ್ಲಿ ಸೇರಲು ರಾಷ್ಟ್ರಗಳು ಒಂದು ಶತಕೋಟಿ ಅಮೆರಿಕನ್ ಡಾಲರ್ (ಸುಮಾರು 8,300 ಕೋಟಿ ರೂ.) ಪಾವತಿಸಬೇಕೆಂಬ ಷರತ್ತು ಹಲವು ಟೀಕೆಗಳಿಗೆ ಗುರಿಯಾಗಿದೆ. ಇದು ಶಾಂತಿ ಸ್ಥಾಪನೆಯ ಹೆಸರಲ್ಲಿ ನಡೆಯುತ್ತಿರುವ ಹೊಸ ರೂಪದ ವಸಾಹತುಶಾಹಿ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಪ್ಯಾಲೆಸ್ಟೈನ್ ಪರ ನಿಲುವಿಗೆ ಧಕ್ಕೆ..?
ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಕಾಲದಿಂದಲೂ ಪಾಕಿಸ್ತಾನವು ಇಸ್ರೇಲ್ ಅನ್ನು ರಾಷ್ಟ್ರವೆಂದು ಗುರುತಿಸಿಲ್ಲ. ಆದರೆ, ಈಗ ಟ್ರಂಪ್ ನೇತೃತ್ವದ ಮಂಡಳಿಯನ್ನು ಸೇರುವ ಮೂಲಕ ಶೆಹಬಾಜ್ ಸರ್ಕಾರವು ದೇಶದ ಐತಿಹಾಸಿಕ ಮತ್ತು ತತ್ವಬದ್ಧ ನಿಲುವನ್ನು ಬಲಿಕೊಡುತ್ತಿದೆ ಎಂದು ಕೆಪಿಕೆ ವಿಧಾನಸಭೆ ಆತಂಕ ವ್ಯಕ್ತಪಡಿಸಿದೆ.

