ಕಾಸರಗೋಡು : ಕವಿ, ಸಾಹಿತಿ, ವಿದ್ವಾಂಸ, ಸಾಹಿತ್ಯ ಸಂಘಟಕ ಹಾಗೂ ಮಾಧ್ಯಮತಜ್ಞ ಡಾ. ವಸಂತಕುಮಾರ ಪೆರ್ಲ ಅವರಿಗೆ ಕನ್ನಡಭವನ ಕೊಡಮಾಡುವ ಪ್ರತಿಷ್ಠಿತ ಗೋವಿಂದ ಪೈ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿದೆ.
ಡಾ. ಪೆರ್ಲ ಅವರು ಗಡಿನಾಡಾದ ಕಾಸರಗೋಡಿನವರಾಗಿದ್ದು, ಕಳೆದ ಐವತ್ತು ವರ್ಷಗಳಿಂದ ಸಾಹಿತ್ಯ-ಸಾಂಸ್ಕøತಿಕ ಕ್ಷೇತ್ರದಲ್ಲಿ ನಿರಂತರ ದುಡಿಯುತ್ತಿದ್ದಾರೆ. ಸಾಹಿತ್ಯದ ನಾನಾ ವಿಭಾಗಗಳಲ್ಲಿ, ಕನ್ನಡ ತುಳು ಇಂಗ್ಲಿಷ್ ಮತ್ತು ಹವ್ಯಕ ಭಾಷೆಯಲ್ಲಿ ಇದುವರೆಗೆ 55 ಕ್ಕೆ ಮೇಲ್ಪಟ್ಟು ಕೃತಿರಚನೆ ಮಾಡಿದ್ದಾರೆ. ಸಾಹಿತ್ಯರಚನೆ, ಸಂಘಟನೆ, ಸಂವರ್ಧನೆ, ಕಿರಿಯರಿಗೆ ಪೆÇ್ರೀತ್ಸಾಹ ಹೀಗೆ ಕನ್ನಡ ನಾಡುನುಡಿಯನ್ನು ಕಟ್ಟುವ ಎಲ್ಲ ಕ್ಷೇತ್ರಗಳಲ್ಲಿ ದುಡಿದು ಓರ್ವ ಸಾಧಕರಾಗಿದ್ದಾರೆ ಎಂದು ಸಮಿತಿ ತಿಳಿಸಿದೆ. ಸಾಹಿತ್ಯದ ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಸಂಪಾದನೆ, ಪ್ರಬಂಧ, ವ್ಯಕ್ತಿಚಿತ್ರ, ಪ್ರವಾಸ ಕಥನ, ಅನುವಾದ ಮೊದಲಾದ ಕ್ಷೇತ್ರಗಳಲ್ಲಿ ಇವರ ಕೃತಿರಚನೆಯ ವ್ಯಾಪ್ತಿಯಿದ್ದು, ಇವರ ಕೆಲವು ರಚನೆಗಳು ತುಳು ಕೊಂಕಣಿ ಮಲಯಾಳಂ ತಮಿಳು ತೆಲುಗು ಹಿಂದಿ ಪಂಜಾಬಿ ನೇಪಾಳಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. ಪತ್ರಿಕೋದ್ಯಮ ರೇಡಿಯೋ ಮತ್ತು ಟಿ. ವಿ., ರಂಗಭೂಮಿ, ಸಿನಿಮಾ ಕ್ಷೇತ್ರಗಳಲ್ಲೂ ದುಡಿದು ವ್ಯಾಪಕ ಅನುಭವ ಮತ್ತು ಲೋಕಜ್ಞಾನ ಗಳಿಸಿದ ಪ್ರತಿಭಾವಂತ ಮತ್ತು ಬಹುಮುಖಿ ವ್ಯಕ್ತಿತ್ವದ ಸಾಹಿತಿಯಾಗಿದ್ದಾರೆ. ಒಳ್ಳೆಯ ವಾಗ್ಮಿಯೂ ಆಗಿದ್ದಾರೆ. ಇವರು ತನ್ನ ಶ್ರೀಮತಿ ಮತ್ತು ಮಕ್ಕಳನ್ನು ಕೂಡ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದು ಅವರುಗಳೂ ಸಾಧನಾ ನಿರತರಾಗಿದ್ದಾರೆ.
ಡಾ. ಪೆರ್ಲ ಅವರಿಗೆ ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಇಪ್ಪತ್ತಕ್ಕಿಂತ ಹೆಚ್ಚು ಪ್ರಶಸ್ತಿಗಳು ಬಂದಿವೆ. ಇವರು ಓರ್ವ ಸಾಧಕ ವ್ಯಕ್ತಿಯಾಗಿದ್ದಾರೆ. ಜ. 18 ರಂದು ನಡೆಯುವ ಕನ್ನಡಭವನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


