ಬದಿಯಡ್ಕ: ಬಳ್ಳಪದವಿನ ವೀಣಾವಾದಿನಿ ಸಂಗೀತ ವಿದ್ಯಾಪೀಠದ ನಾಲ್ಕು ದಿನಗಳ ಸಂಗೀತೋತ್ಸವವು ಮಧುರೈ ಟಿ ಎನ್ ಎಸ್ ಕೃಷ್ಣನ್ ಅವರ ಕಚೇರಿಯೊಂದಿಗೆ ಸಂಪನ್ನಗೊಂಡಿತು. ಬೆಳಗ್ಗೆ ಪಂಚರತ್ನ ಕೀರ್ತನೆಗಳ ಆಲಾಪದೊಂದಿಗೆ ವೀಣಾವಾದಿನಿ ತಂಡದಿಂದ ಕಾರ್ಯಕ್ರಮವು ಆರಂಭಗೊಂಡಿತು. ಪಕ್ಕವಾದ್ಯದಲ್ಲಿ ವಯಲಿನ್ ನಲ್ಲಿ ಪ್ರಭಾಕರ ಕುಂಜಾರು, ಧನಶ್ರೀ ಶಬರಾಯ, ಮೃದಂಗದಲ್ಲಿ ಬಾಲಕೃಷ್ಣ ಕಮ್ಮತ್, ಖಂಜಿರದಲ್ಲಿ ವಿಷ್ಣು ಬಿ ಕಮ್ಮತ್, ಘಟಮ್ ನಲ್ಲಿ ತಿರುವನನಂತಪುರಂ ರಾಜೇಶ್, ತಬಲಾದಲ್ಲಿ ರತ್ನಶ್ರೀ ಅಯ್ಯರ್ ಮೊದಲಾದ ಖ್ಯಾತ ಕಲಾವಿದರು ಸಹಕಾರ ನೀಡಿದರು.
ನಂತರ ವೀಣಾವಾದಿನಿಯ ಎಲ್ಲ ಹಿರಿಯ ಕಿರಿಯ ವಿದ್ಯಾರ್ಥಿಗಳಿಂದ "ನಾದೋಪಾಸನಾ" ಕಾರ್ಯಕ್ರಮವು ನೆರವೇರಿತು. ವಿದ್ಯಾರ್ಥಿಗಳಿಗೆ ಪಕ್ಕವಾದ್ಯದಲ್ಲಿ ಪ್ರಭಾಕರ ಕುಂಜಾರು ಮತ್ತು ಧನಶ್ರೀ ಶಬರಾಯ ಮತ್ತಿತರ ಹಿರಿಯ ಕಲಾವಿದರು ಸಹಕಾರ ನೀಡಿದರು. ಹಿಂದೆ ಹಿರಿಯ ಕಲಾವಿದ ಬಾಲಮುರಳಿ ಕೃಷ್ಣ ಅವರು ಸತತ ಮೂರು ಬಾರಿ ವೀಣಾವಾದಿನಿಗೆ ಭೇಟಿ ನೀಡಿ ವೀಣಾವಾದಿನಿಯ ವಿದ್ಯಾರ್ಥಿಗಳನ್ನು ಹರಸಿದ್ದರು. ಅವರು ರಚಿಸಿ ಸಂಯೋಜಿಸಿದ 72 ಮೇಳಕರ್ತ ಕೃತಿಗಳನ್ನು ಯೋಗೀಶ ಶರ್ಮ ಅವರು ವಿದ್ಯಾರ್ಥಿಗಳಿಗೆ ಕಲಿಸಿದ್ದರು. ಈ ಕೃತಿಗಳನ್ನು ಬಾಲಮುರಳಿಯವರ ನೆನಪಿಗಾಗಿ ಮುರಳೀರವಂ ಕಾರ್ಯಕ್ರಮದ ಮೂಲಕ ಪ್ರತಿ ವರ್ಷ ವೀಣಾವಾದಿನಿಯ ವಾರ್ಷಿಕೋತ್ಸವದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಪಕ್ಕವಾದ್ಯದಲ್ಲಿ ಧನಶ್ರೀ ಶಬರಾಯ, ಮಾಸ್ಟರ್ ಆಶ್ಲೇಷ, ಮಾಸ್ಟರ್ ಪರಾಶರ ಉಪ್ಪಂಗಳ, ಮಾಸ್ಟರ್ ವಿಶ್ವಾಸ್ ಪದ್ಯಾಣ ಇವರು ಸಹಕರಿಸಿದರು. ಈ ವರ್ಷದ ವೀಣಾವಾದಿನಿ ಪುರಸ್ಕಾರವನ್ನು ಹಿರಿಯ ಮೃದಂಗ ಕಲಾವಿದ ಬಾಲಕೃಷ್ಣ ಕಮ್ಮತ್ ಮತ್ತು ಪ್ರತಿಭಾವಂತ ವಯಲಿನ್ ಕಲಾವಿದ ತಿರುವನಂತಪುರಂ ರಾಜೇಶ್ ಅವರಿಗೆ ಪ್ರದಾನ ಮಾಡಲಾಯಿತು. ವೀಣಾವಾದಿನಿಯ ವಿದ್ಯಾರ್ಥಿನಿ ಪಲ್ಲವಿ ರಾವ್ ಅವರು ಆಕಾಶವಾಣಿ ಬಿ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾದ ಪ್ರಯುಕ್ತ ಅವರನ್ನು ಗೌರವಿಸಲಾಯಿತು.
ಮತ್ತು ಬಾಲಮುರಳಿ ಕೊಮ್ಮುಂಜೆ ಅವರನ್ನೂ ಗೌರವಿಸಲಾಯಿತು. ಕೊನೆಯಲ್ಲಿ ಮಧುರೈ ಟಿ ಎನ್ ಎಸ್ ಕೃಷ್ಣ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಜರಗಿತು. ವಯಲಿನ್ ನಲ್ಲಿ ಎಡಪಳ್ಳಿ ಅಜಿತ್ ಕುಮಾರ್, ಮೃದಂಗದಲ್ಲಿ ವಿದ್ವಾನ್ ಬಾಲಕೃಷ್ಣ ಕಮ್ಮತ್, ಘಟಂನಲ್ಲಿ ತಿರುವನಂತಪುರ ಆರ್. ರಾಜೇಶ್, ಖಂಜಿರದಲ್ಲಿ ವಿಷ್ಣು ವಿ. ಕಮ್ಮತ್ ಅವರು ಸಹಕರಿಸಿದರು.
ಸಮಾರೋಪ ಸಮಾರಂಭದಲ್ಲಿ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಂಗಳೂರಿನ ಹಿಂದಿನ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್, ಆಕಾಶವಾಣಿಯ ನಿವೃತ್ತ ನಿರ್ದೇಶಕ, ಸಾಹಿತಿ ಡಾ. ವಸಂತಕುಮಾರ ಪೆರ್ಲ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.



