ಕಾಸರಗೋಡು: ಕುಂಬಳೆ ಆರಿಕ್ಕಾಡಿಯ ಟೋಲ್ ಪ್ಲಾಜಾ ಸಮಸ್ಯೆಯನ್ನು ಕಾಂಗ್ರೆಸ್ ಸಂಸದರು ಲೋಕಸಭೆಯಲ್ಲಿ ಪ್ರಸ್ತಾಪಿಸಲಿರುವುದಾಗಿ ಐಕ್ಯರಂಗ ಸಂಚಾಲಕ, ಸಂಸದ ಅಡೂರ್ ಪ್ರಕಾಶ್ ತಿಳಿಸಿದ್ದಾರೆ. ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಾಸರಗೋಡಿಗೆ ಆಗಮಿಸಿದ್ದ ಸಂದರ್ಭ ನಗರದ ಅತಿಥಿಗೃಹದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ಕೇರಳದಲ್ಲಿ ಐಕ್ಯರಂಗ ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಶ್ರಮ ಮುಂದುವರಿಸಿದ್ದು, ಪಕ್ಷಕ್ಕೆ ಆಗಮಿಸುವವರಿಗೆ ಮುಕ್ತ ಅವಕಾಶವಿದೆ. ಒಕ್ಕೂಟ ತ್ಯಜಿಸಿ ಎಡರಂಗ ಪಾಳಯದಲ್ಲಿ ಗುರುತಿಸಿಕೊಂಡಿರುವ ಜೋಸ್ ಕೆ. ಮಾಣಿ ಅವರನ್ನು ಒಕ್ಕೂಟಕ್ಕೆ ಕರೆತರುವಲ್ಲಿ ಐಕ್ಯರಂಗದಲ್ಲಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ತಿಳಿಸಿದರು. ಶಬರಿಮಲೆ ಚಿನ್ನ ಕಳವು ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕೆಂಬುದು ರಾಜ್ಯದ ಜನತೆಯ ಆಶಯವಾಗಿದೆ. ಇಂದಲ್ಲ ನಾಳೆಯಾದರೂ ಶಬರಿಮಲೆಯ ಚಿನ್ನ ಕಳವು ಪ್ರಕರಣ ಬಯಲಾಗಲಿದೆ. ಚಿನ್ನ ಕಳವು ಪ್ರಕರಣದ ತನಿಖೆ ಹಾದಿ ತಪ್ಪಿಸುವ ಯತ್ನವನ್ನು ತನಿಖಾ ತಂಡ ಪರಾಜಯಗೊಳಿಸುವ ವಿಶ್ವಾಸವಿರುವುದಾಗಿ ತಿಳಿಸಿದರು.
ಡಿಸಿಸಿ ಅಧ್ಯಕ್ಷ ಪಿ.ಕೆಫೈಸಲ್, ಜಿಲ್ಲಾ ಐಕ್ಯರಂಗ ಸಂಚಾಲಕ ಎ. ಗೋವಿಂದನ್ ನಾಯರ್, ಕೆ.ನೀಲಕಂಠನ್, ರಾಜನ್ ಪೆರಿಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

