ಕುಂಬಳೆ: ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಆರಂಭಗೊಳ್ಳುವುದರೊಂದಿಗೆ ಮಂಗಳೂರಿಗೆ ತೆರಳುವ ಪ್ರಯಾಣಿಕರು ಇನ್ನಷ್ಟು ಮೊತ್ತವನ್ನು ಇದಕ್ಕಾಗಿ ವ್ಯಯಿಸಬೇಕಾಗಿಬಂದಿದೆ.
ಕರ್ನಾಟಕ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಇದರ ಹೆಸರಲ್ಲಿ ಪ್ರಯಾಣ ದರ ಹೆಚ್ಚಿಸಲಾಗಿದೆ. ಮಂಗಳವಾರದಿಂದ ಹೆಚ್ಚಿಸಿದ ದರ ವಸೂಲಿ ಮಾಡಲಾಗುತ್ತಿದೆ. ಯಾವುದೇ ಮುನ್ಸೂಚನೆ ನೀಡದೆ ಪ್ರಯಾಣದರ ಹೆಚ್ಚಿಸಿರುವುದಾಗಿ ಇದು ಪ್ರಯಾಣಿಕರಿಗೆ ಭಾರೀ ಹೊಡೆತವಾಗಿದೆ.
ಕುಂಬಳೆಯಿಂದ ಉಪ್ಪಳಕ್ಕೆ 18 ರೂಪಾಯಿಯಿದ್ದುದು ಈಗ 25 ರೂಪಾಯಿಯಾಗಿ ಹೆಚ್ಚಳಗೊಂಡಿದೆ. ಕುಂಬಳೆಯಿಂದ ಮಂಗಳೂರಿಗೆ 67 ರೂಪಾಯಿ ಇದ್ದುದು 75 ರೂ. ಏರಿಕೆಯಾಗಿದೆ. ಕಾಸರಗೋಡಿನಿಂದ ಮಂಗಳೂರಿಗೆ 88 ರೂ.ನಿಂದ 95 ರೂ.ಗಳಷ್ಟು ಏರಿಕೆಯಾಗಿದೆ. ಇದೇ ವೇಳೆ ಕುಂಬಳೆಯಿಂದ ಮಂಗಳೂರಿಗೆ ರಾಜಹಂಸ ಬಸ್‍ನಲ್ಲಿ ಈ ಹಿಂದೆ 80 ರೂಪಾಯಿ ಇದ್ದುದು ಈಗ 90 ರೂಪಾಯಿಯಾಗಿ ಹೆಚ್ಚಳಗೊಂಡಿದೆ. ಟೋಲ್ ಸಂಗ್ರಹದ ಬೆನ್ನಲ್ಲೇ ಕರ್ನಾಟಕ ಸಾರಿಗೆ ಬಸ್‍ನಲ್ಲಿ ಪ್ರಯಾಣ ದರ ಹೆಚ್ಚಿಸಲಾಗಿದೆ. ಇದು ಕೆಎಸ್ ಆರ್‍ಟಿಸಿ ಬಸ್‍ಗಳನ್ನೇ ಆಶ್ರಯಿಸುವವರಿಗೆ ಭಾರೀ ಹೊಡೆತ ನೀಡಿದೆ. ಈ ಮಧ್ಯೆ ಕೇರಳ ಎಸ್‍ಆರ್‍ಟಿಸಿ ದರ ಈಗ ಹೆಚ್ಚಿಸಿಲ್ಲ. ಶೀಘ್ರದಲ್ಲೇ ದರ ಹೆಚ್ಚಿಸಲಾಗುವುದೆಂಬ ಸೂಚನೆಯು ಅಧಿಕಾರಿಗಳ ಭಾಗದಿಂದ ಉಂಟಾಗಿದೆ.
ಪ್ರಯಾಣ ದರ ಹೆಚ್ಚಳ ವಿರುದ್ಧ ಯೂತ್ ಲೀಗ್ ಪ್ರತಿಭಟನೆಯತ್ತ:
ಆರಿಕ್ಕಾಡಿಯಲ್ಲಿ ಕಾನೂನು ವಿರುದ್ಧವಾಗಿ ಆರಂಭಿಸಿದ ಟೋಲ್ ಸಂಗ್ರಹ ಹೆಸರಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಬಸ್‍ನಲ್ಲಿ ಪ್ರಯಾಣದರ ಹೆಚ್ಚಿಸಿರುವುದು ಖಂಡನೀಯವೆಂದು ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ಮಂಡಲ ಸಮಿತಿ ತಿಳಿಸಿದೆ. ಟೋಲ್ ಪ್ಲಾಸಾ ಸಮೀಪ ಸರ್ವೀಸ್ ರೋಡ್ ನಿರ್ಮಿಸದ ಲೋಪದಿಂದ ಜನಸಾಮಾನ್ಯರಾದ ಪ್ರಯಾಣಿಕರು ದಂಡ ನೀಡಬೇಕಾಗಿ ಬರುತ್ತಿರುವುದನ್ನು ಅಂಗೀಕರಿಸಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಕೇರಳ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದೂ ಕರ್ನಾಟಕ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅನ್ಯಾಯ ರೀತಿಯಲ್ಲಿ ಪ್ರಯಾಣದರ ಹೆಚ್ಚಿಸಿರುವುದನ್ನು ಹಿಂತೆಗೆಯುವಂತೆ ಮಾಡಬೇಕೆಂದು ಯೂತ್ ಲೀಗ್ ಒತ್ತಾಯಿಸಿದೆ.
ಜನಸಾಮಾನ್ಯರ ಸಂಕಷ್ಟಗಳನ್ನು ಪರಿಗಣಿಸಿ ಹೆಚ್ಚುವರಿ ದರ ವಸೂಲಿ ಮಾಡುವುದನ್ನು ಕೊನೆಗೊಳಿಸದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ಮಂಡಲ ಅಧ್ಯಕ್ಷ ಬಿ.ಎಂ. ಮುಸ್ತಫ, ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ದಂಡೆಗೋಳಿ ತಿಳಿಸಿದ್ದಾರೆ.

.jpg)
