ಕಾಸರಗೋಡು: ಕುಂಬಳ-ಅರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನ್ಯಾಯವಾಗಿ ಜಾರಿಗೆ ತರಲಾಗಿರುವ ಟೋಲ್ ಸಂಗ್ರಹವನ್ನು ತಕ್ಷಣ ಸ್ಥಗಿತಗೊಳಿಸುವಂತೆ ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಷನ್(ಸಿಒಎ)ನ 15ನೇ ಕಾಸರಗೋಡು ಪ್ರಾದೇಶಿಕ ಸಮ್ಮೇಳನ ಒತ್ತಾಯಿಸಿತು.
ಕಾಸರಗೋಡಿನ ಕಲನಾಡು ಮಲಬಾರ್ ರೆಸಿಡೆನ್ಸಿಯಲ್ಲಿ ನಡೆದ ಸಮ್ಮೇಳನವನ್ನು ಸಿಒಎ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಕೇರಳ ವಿಷನ್ ನ್ಯೂಸ್ ಎಂಡಿ ಪ್ರಜೀಶ್ ಅಚಾಂಡಿ ಉದ್ಘಾಟಿಸಿದರು. ಪ್ರಾದೇಶಿಕ ಸಮಿತಿ ಅಧ್ಯಕ್ಷ ಕೆ.ದಿವಾಕರ ಅಧ್ಯಕ್ಷತೆ ವಹಿಸಿದ್ದರುಳ್ಳೀ ಸಂದರ್ಭ ವಿವಿಧ ವರದಿ ಮಂಡಿಸಲಾಯಿತು.
ರಾಜ್ಯ ಸಮಿತಿ ಸದಸ್ಯರಾದ ಎಂ.ಲೋಹಿತಾಕ್ಷನ್, ಶುಕ್ಕೂರು ಕೋಳಿಕ್ಕರ, ಸತೀಶ್ ಕೆ.ಪಾಕ್ಕಂ, ಜಿಲ್ಲಾ ಕೋಶಾಧಿಕಾರಿ ಪಿ.ವಿನೋದ್, ಸಿಸಿಎನ್ ಎಂಡಿ ಟಿ.ವಿ.ಮೋಹನನ್, ಕಾಞಂಗಾಡ್ ಪ್ರಾದೇಶಿಕ ಕಾರ್ಯದರ್ಶಿ ಪಿ.ಪ್ರಕಾಶ್, ನೀಲೇಶ್ವರಂ ಪ್ರಾದೇಶಿಕ ಕಾರ್ಯದರ್ಶಿ ಸಿ.ಪಿ.ಬೈಜುರಾಜ್ ಉಪಸ್ಥಿತರಿದ್ದರು. ಈ ಸಂದರ್ಭ ಫೈನ್ ಟಿವಿಯ ಸಂಸ್ಥಾಪಕ ಮತ್ತು ಜಿಲ್ಲಾ ಸಮಿತಿಯ ಹಿರಿಯ ಸದಸ್ಯ ಉಸ್ಮಾನ್ ಪಾಂಡ್ಯಾಲ್, ತಿಡಂಬು ನೃತ್ಯದಲ್ಲಿ ಗುರು ಪೂಜಾ ಪ್ರಶಸ್ತಿ ಪಡೆದ ಸಂಸ್ಥೆಯ ಸದಸ್ಯ ಉಪೇಂದ್ರ ಅಗ್ಗಿತ್ತಾಯ ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನದ ಜೊತೆಗೆ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸ್ವಾಗತಸಮಿತಿ ಅಧ್ಯಕ್ಷ ಕೆ. ಸುನೀಲ್‍ಕುಮಾರ್ ಸ್ವಾಗತಿಸಿದರು. ಕೇರಳ ಸರ್ಕಾರ ಮಲಯಾಳಂ ಭಾಷಾ ಮಸೂದೆಯನ್ನು ಹಿಂಪಡೆಯಬೇಕು, ಪಾಲಕುನ್ನು ಮತ್ತು ಉದುಮ ರೈಲ್ವೆ ಮೇಲ್ಸೇತುವೆಗಳ ನಿರ್ಮಾಣವನ್ನು ಶೀಘ್ರ ಪ್ರಾರಂಭಿಸಬೇಕು, ಕೇಬಲ್ ಟಿವಿ ಆಪರೇಟರ್‍ಗಳಿಗೆ ವಿದ್ಯುತ್ ಪೋಸ್ಟ್‍ಗಳನ್ನು ಉಚಿತವಾಗಿ ಒದಗಿಸಬೇಕು, ಕೇಬಲ್ ಟಿವಿ ಆಪರೇಟರ್‍ಗಳನ್ನು ಕಲ್ಯಾಣ ನಿಧಿಗೆ ಒಳಪಡಿಸುವುದರೊಂದಿಗೆ ಪಿಂಚಣಿ ಒದಗಿಸಬೇಕು ಮುಂತಾದ ಬೇಡಿಕೆಯುಳ್ಳ ನಿರ್ಣಯಗಳನ್ನು ಸಮ್ಮೇಳನವು ಮಂಡಿಸಿತು.


