ಭಾರತ ಮತ್ತು ಇರಾನ್ ನಡುವೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ವ್ಯಾಪಾರ & ವ್ಯವಹಾರ ನಡೆಯುತ್ತಾ ಬಂದಿದೆ. ಭಾರತ ಜಗತ್ತಿನ ಬಹುತೇಕ ಎಲ್ಲಾ ದೇಶಗಳ ಜೊತೆಗೆ ಉತ್ತಮ ಸಂಬಂಧ ಕಾಪಾಡಿಕೊಂಡು ಬಂದಿದ್ದು, ಒಂದು ಕಡೆ ಪಾಶ್ಚಿಮಾತ್ಯರು ಹಾಗೂ ಇನ್ನೊಂದು ಕಡೆ ಪಾಶ್ಚಿಮಾತ್ಯರ ಶತ್ರು ದೇಶಗಳ ಜೊತೆಗೂ ಉತ್ತಮ ಸಂಬಂಧ ಹೊಂದಿದೆ.
ಅದೇ ರೀತಿ ಇರಾನ್ ಜೊತೆಯಲ್ಲೂ ವ್ಯಾಪಾರ ಸಂಬಂಧ ಕಾಪಾಡಿಕೊಂಡು ಬಂದಿದ್ದು, ಪ್ರಮುಖವಾಗಿ ತೈಲ ಸೇರಿದಂತೆ ಹಲವು ವಿಚಾರಗಳಲ್ಲಿ ಭಾರತಕ್ಕೆ ಈ ನಿರ್ಧಾರ ಲಾಭ ನೀಡಿದೆ. ಆದರೆ ಈಗ ಇರಾನ್ ಮತ್ತು ಅಮೆರಿಕ ನಡುವೆ ಯುದ್ಧದ ಕಾರ್ಮೋಡವು ಆವರಿಸಿದ್ದು, ಭಾರತ ಚಾಬಹಾರ್ ಬಂದರು ಬಿಟ್ಟುಕೊಡದೇ ಇರಲು ಮಾಸ್ಟರ್ ಪ್ಲಾನ್ ಮಾಡಿದೆ.
ಇರಾನ್‌ನ ಚಾಬಹಾರ್ ಬಂದರಿನ ಮೇಲೆ ಭಾರತ ಹಿಡಿತ ಹೊಂದಿದ್ದು, ಚಾಬಹಾರ್ ಕಾರ್ಯಾಚರಣೆ ಮೇಲಿನ ಅಮೆರಿಕದ ನಿರ್ಬಂಧಗಳ ವಿನಾಯಿತಿ ಅವಧಿ ಮುಗಿಯುತ್ತಿದೆ. ಹೀಗಿದ್ದಾಗ ಭಾರತ ಹೊಸದಾದ ಉಪಾಯ ಮಾಡಿದ್ದು, ವಾಷಿಂಗ್ಟನ್ ಜೊತೆಗೆ ಇದೇ ವಿಚಾರವಾಗಿ ಸಾಲು ಸಾಲು ಚರ್ಚೆ ನಡೆಸುತ್ತಿದೆ. ಈ ಮೂಲಕ ಚಾಬಹಾರ್ ಬಂದರಿನ ಮೇಲಿರುವ ಹಿಡಿತವನ್ನು ಉಳಿಸಿಕೊಳ್ಳಲು ಹೊಸ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಬಂದರಲ್ಲಿ ಭಾರತದ ದೀರ್ಘಕಾಲೀನ ಹಿತಾಸಕ್ತಿ ಕಾಪಾಡುವ ಜೊತೆಗೆ ಅಮೆರಿಕದ ಕಳವಳ ಪರಿಹರಿಸಲು ಭಾರತ ಮುಂದಾಗಿದೆ.
ಅಮೆರಿಕದ ಜೊತೆಗೆ ನಿರಂತರ ಚರ್ಚೆ
ಸರ್ಕಾರದ ಉನ್ನತ ಮೂಲಗಳ ಮಾಹಿತಿ ಆಧರಿಸಿ ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದ್ದು, ಚಾಬಹಾರ್ ಬಂದರಿನಲ್ಲಿ ನಮ್ಮ ಹಿತಾಸಕ್ತಿಗಳನ್ನ ಪರೋಕ್ಷವಾಗಿ ರಕ್ಷಿಸುವ ಮತ್ತು ಅಮೆರಿಕವನ್ನೂ ಸುಮ್ಮನಾಗಿಸುವ ಪ್ರಯತ್ನಗಳು ಸಾಗಿವೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಭಾರತಕ್ಕೆ ಈ ಬಂದರು ಬಹುಮುಖ್ಯವಾಗಿದ್ದು, ಮಧ್ಯಪ್ರಾಚ್ಯ ಭಾಗದಲ್ಲಿ ವ್ಯಪಾರ & ವಹಿವಾಟು ನಡೆಸಲು ದೊಡ್ಡ ಮಟ್ಟದಲ್ಲಿ ಸಹಾಯಕವಾಗಿದೆ.
ಭಾರತ ನಿರ್ಬಂಧದ ಷರತ್ತುಗಳ ಆಧಾರದಲ್ಲೇ ಕೆಲಸ ಮಾಡುತ್ತದೆ ಎಂಬುದನ್ನು ಅಮೆರಿಕಗೆ ತೋರಿಸಲು ಉತ್ಸುಕವಾಗಿದ್ದು, ಇದೇ ಕಾರಣಕ್ಕೆ ಮಾತುಕತೆ ಸ್ವಲ್ಪ ಜಟಿಲವಾಗಿದೆ ಎನ್ನಲಾಗಿದೆ. ಮತ್ತೊಂದು ಕಡೆ ಇರಾನ್ ವಿರುದ್ಧ ಅಮೆರಿಕ ಸೇನಾ ಕಾರ್ಯಾಚರಣೆ ನಡೆಸಿದರೆ ಪರಿಸ್ಥಿತಿ ಏನು? ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಇದಕ್ಕಿದ್ದಂತೆ ಅಮೆರಿಕದ ಬೃಹತ್ ಯುದ್ಧ ನೌಕೆ ಇದೀಗ ಮಧ್ಯಪ್ರಾಚ್ಯದ ಕಡೆ ಹೊರಟು ನಿಂತಿರುವುದು ಸಹಜವಾಗಿ ಕುತೂಹಲ ಕೆರಳಿಸಿದೆ.
ಮಧ್ಯಪ್ರಾಚ್ಯಕ್ಕೆ ಹೊರಟ ಯುಎಸ್‌ಎಸ್ ಅಬ್ರಹಾಂ ಲಿಂಕನ್
ಇರಾನ್ ದೇಶದಲ್ಲಿ ಅತಿದೊಡ್ಡ ಪ್ರತಿಭಟನೆಗಳು ನಡೆಯುತ್ತಿದ್ದು, ಸರ್ಕಾರದ ವಿರುದ್ಧ ಜನರು ಭಾರಿ ದೊಡ್ಡ ಪ್ರಮಾಣದಲ್ಲಿ ರೊಚ್ಚಿಗೆದ್ದು ಹೋರಾಟ ಶುರು ಮಾಡಿದ್ದಾರೆ. ಇಂತಹ ಸಮಯದಲ್ಲೇ ಅತ್ತ ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡ ಮಿಲಿಟರಿ ದಾಳಿ ಮೂಲಕ ತನ್ನ ಆಜನ್ಮ ವೈರಿಯಂತೆ ಇರುವ ಇರಾನ್ ಕಥೆ ಮುಗಿಸಲು ಸಿದ್ಧವಾಗಿದೆಯಾ? ಎಂಬ ಚರ್ಚೆ ಶುರುವಾಗಿತ್ತು. ಹೀಗಿದ್ದಾಗಲೇ ಅಮೆರಿಕ ಸೇನೆಯ ಬೃಹತ್ ಶಕ್ತಿ ಎಂದು ಕರೆಯಲಾಗುವ ಸೇನಾ ಹಡಗು ಮಧ್ಯಪ್ರಾಚ್ಯ ಕಡೆಗೆ ಎಂಟ್ರಿ ಕೊಡುತ್ತಿದೆ. ಯುಎಸ್‌ಎಸ್ ಅಬ್ರಹಾಂ ಲಿಂಕನ್ ದಕ್ಷಿಣ ಚೀನಾ ಸಮುದ್ರ ತೊರೆದು ಪಶ್ಚಿಮ ಏಷ್ಯಾಗೆ ತೆರಳುತ್ತಿದೆ. ಇದು ಯುದ್ಧ ವಿಮಾನ ಹೊತ್ತೊಯ್ಯುವ ಸಾಮರ್ಥ್ಯ ಸೇರಿ ಹಲವು ವೈಶಿಷ್ಟ್ಯತೆ ಹೊಂದಿದೆ.

