ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಈ ಬಾರಿ ಅಪರೂಪದಷ್ಟು ಒಣ ಚಳಿಗಾಲ ಅನುಭವವಾಗಿದ್ದು, ಸಾಮಾನ್ಯವಾಗಿ ಹಿಮದಿಂದ ಮುಚ್ಚಿರಬೇಕಾದ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದ ಪರ್ವತ ಶಿಖರಗಳು ಬಹುತೇಕ ಬರಿದಾಗಿವೆ. ಭಾರತೀಯ ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ, ಡಿಸೆಂಬರ್ ಮತ್ತು ಜನವರಿಯಲ್ಲಿ ಉತ್ತರಾಖಂಡದಲ್ಲಿ ಮಳೆಯೇ ದಾಖಲಾಗಿಲ್ಲ.
ಹಿಮಾಚಲ ಪ್ರದೇಶದಲ್ಲಿ 1901ರಿಂದಲೂ ದಾಖಲಾಗಿರುವ ಮಾಹಿತಿಯಲ್ಲಿ, ಈ ಬಾರಿ ಆರನೇ ಅತಿ ಕಡಿಮೆ ಡಿಸೆಂಬರ್ ಮಳೆಯಾಗಿದೆ. ಜಮ್ಮು-ಕಾಶ್ಮೀರದಲ್ಲಿಯೂ ಜನವರಿ ಅಂತ್ಯದವರೆಗೆ ಮಳೆ ಅಥವಾ ಹಿಮಪಾತ ಬಹಳ ಕಡಿಮೆಯಾಗಿದೆ.
ಕಾಡ್ಗಿಚ್ಚಿನ ಅಪಾಯ
ಈ ಮಳೆ ಹಾಗೂ ಹಿಮಪಾತದ ಕೊರತೆಯಿಂದ ಹಿಮದ ಕೊರತೆ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಹಿಮಾಲಯ ಪ್ರದೇಶದ ಚಳಿಗಾಲದ ಹವಾಮಾನವು ಕ್ರಮೇಣ ಅಸ್ಥಿರವಾಗುತ್ತಿರುವ ಬಗ್ಗೆ ಗಂಭೀರ ಚಿಂತೆ ಮೂಡಿಸಿದೆ. ಹಿಮಪಾತ ಕಡಿಮೆಯಾದರೆ ನೀರಿನ ಲಭ್ಯತೆ ಕುಗ್ಗುತ್ತದೆ, ಕಾಡ್ಗಿಚ್ಚಿನ ಅಪಾಯ ಹೆಚ್ಚುತ್ತದೆ ಮತ್ತು ಋತುಮಾನದ ಮೇಲೆ ಅವಲಂಬಿತವಾಗಿರುವ ಕೃಷಿ ಹಾಗೂ ಜನಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಈ ಒಣ ಹವಾಮಾನ ಸಮಸ್ಯೆಯು ಪರ್ವತ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ದೇಶದಾದ್ಯಂತ ಚಳಿಗಾಲದ ಮಳೆ ಸಾಮಾನ್ಯಕ್ಕಿಂತ ಬಹಳ ಕಡಿಮೆಯಾಗಿದೆ. ಜನವರಿಯ ಮೊದಲಾರ್ಧದಲ್ಲಿ ದೇಶವು ನಿರೀಕ್ಷಿತ ಮಳೆಯ ನಾಲ್ಕನೇ ಭಾಗಕ್ಕೂ ಕಡಿಮೆ ಪ್ರಮಾಣದ ಮಳೆಯನ್ನೇ ಪಡೆದಿದೆ. ವಿಶೇಷವಾಗಿ ವಾಯುವ್ಯ ಭಾರತದಲ್ಲಿ ಪರಿಸ್ಥಿತಿ ಹೆಚ್ಚು ಗಂಭೀರವಾಗಿದ್ದು, ಈ ಅವಧಿಯಲ್ಲಿ ಸಾಮಾನ್ಯವಾಗಿ ಬರಬೇಕಾದ ಮಳೆಯ ಸುಮಾರು ಶೇ 8ರಷ್ಟು ಮಾತ್ರ ದಾಖಲಾಗಿದೆ.
ಈ ಹವಾಮಾನ ದಾಖಲೆಗಳನ್ನು ನೋಡಿದರೆ, ಹಿಮಾಲಯ ರಾಜ್ಯಗಳಲ್ಲಿ ಒಣ ಚಳಿಗಾಲ ಹೆಚ್ಚಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಉತ್ತರಾಖಂಡವು ಜನವರಿಯಲ್ಲಿ ಅತಿ ಕಡಿಮೆ ಮಳೆಯನ್ನೇ ನಿರಂತರವಾಗಿ ಕಂಡಿದ್ದು, ದೀರ್ಘಾವಧಿಯ ಚಳಿಗಾಲದ ಮಳೆಯ ಮಾದರಿಯಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ. ವಿಶೇಷವಾಗಿ 2024-25ರ ಚಳಿಗಾಲದಲ್ಲಿ ವಾಯುವ್ಯ ಪ್ರದೇಶದಲ್ಲಿ ಶೇಕಡಾ 96ರಷ್ಟು ಮಳೆ ಕೊರತೆ ದಾಖಲಾಗಿತ್ತು. ಸಂಶೋಧನೆಗಳೂ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಚಳಿಗಾಲದ ಮಳೆ ಕ್ರಮೇಣ ಇಳಿಮುಖವಾಗುತ್ತಿರುವುದನ್ನು ಸೂಚಿಸುತ್ತಿವೆ.
ಚಳಿಗಾಲವು ಸಮತಟ ಪ್ರದೇಶಗಳಲ್ಲಿರುವ ಬೆಳೆಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಜೊತೆಗೆ ಎತ್ತರದ ಪ್ರದೇಶಗಳಲ್ಲಿ ಭೂಗರ್ಭ ಜಲಮಟ್ಟ ಹಾಗೂ ಹಿಮ ಸಂಗ್ರಹವನ್ನು ಮರುಪೂರೈಸಲು ಚಳಿಗಾಲದ ಮಳೆ ಮತ್ತು ಹಿಮಪಾತ ಅಗತ್ಯ. ಇಂತಹ ಒಣ ಪರಿಸ್ಥಿತಿಗಳು ನೇಪಾಳದಲ್ಲಿಯೂ ವರದಿಯಾಗಿರುವುದು, ಮಧ್ಯ ಹಿಮಾಲಯ ಪ್ರದೇಶದಾದ್ಯಂತ ವ್ಯಾಪಕ ಹವಾಮಾನ ಬದಲಾವಣೆಯ ಸಂಕೇತ ಎನ್ನಲಾಗುತ್ತಿದೆ.
ಹಿಮ ಬೇಗ ಕರಗುತ್ತಿದೆ
ಇನ್ನೊಂದು ಆತಂಕಕಾರಿ ಅಂಶವೆಂದರೆ ಹಿಮ ನೆಲದ ಮೇಲೆ ಉಳಿಯುವ ಅವಧಿಯ ಕಡಿತವಾಗಿರುವುದು. ಅಂದರೆ ತಡವಾಗಿ ಹಿಮಪಾತವಾದರೂ, ಹಗಲಿನ ಹೆಚ್ಚಿದ ತಾಪಮಾನ ಮತ್ತು ಹಗಲು-ರಾತ್ರಿ ತಾಪಮಾನಗಳ ನಡುವಿನ ದೊಡ್ಡ ವ್ಯತ್ಯಾಸದಿಂದ ಹಿಮ ಬೇಗ ಕರಗುತ್ತಿದೆ. ಇದರಿಂದ ನೀರಿನ ಮೂಲಗಳನ್ನು ಮರುಪೂರೈಸುವಲ್ಲಿ ಹಿಮಪಾತದ ಪರಿಣಾಮ ಕಡಿಮೆಯಾಗುತ್ತಿದೆ. ಆದರೂ ಸ್ವಲ್ಪ ನಿರಾಳತೆಯ ಸೂಚನೆ ಇದೆ ಎನ್ನಲಾಗುತ್ತಿದೆ.

ಹವಾಮಾನ ಮುನ್ಸೂಚನೆಗಳ ಪ್ರಕಾರ ಜನವರಿ 18ರಿಂದ 20ರ ನಡುವೆ ವಾಯುವ್ಯ ಭಾರತದಲ್ಲಿ ಸಣ್ಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ದೇಶದಾದ್ಯಂತ ಒಟ್ಟಾರೆ ಮಳೆ ಇನ್ನೂ ಸಾಮಾನ್ಯಕ್ಕಿಂತ ಕಡಿಮೆಯೇ ಇರಬಹುದಾದರೂ, ಈ ಅವಧಿಯಲ್ಲಿ ಪಶ್ಚಿಮ ಹಿಮಾಲಯ ಮತ್ತು ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ಸರಾಸರಿ ಅಥವಾ ಸ್ವಲ್ಪ ಹೆಚ್ಚಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹಿಮವಿಲ್ಲದ ಹಿಮಾಲಯಗಳು ಕೇವಲ ಪರ್ವತ ಪ್ರದೇಶದ ಸಮಸ್ಯೆಯಲ್ಲ. ಇದು ದೇಶದ ನೀರಿನ ವ್ಯವಸ್ಥೆ, ಕೃಷಿ, ಆಹಾರ ಭದ್ರತೆ ಮತ್ತು ಪರಿಸರ ಸಮತೋಲನಕ್ಕೆ ನೇರ ಪರಿಣಾಮ ಬೀರುವ ಗಂಭೀರ ಎಚ್ಚರಿಕೆ ಎನ್ನಬಹುದು.

