ಕಾಸರಗೋಡು: ಕಾಸರಗೋಡು ಪಾರಂಪರಿಕ ಕೃಷಿ ಮತ್ತು ನೀರಾವರಿಗೆ ಹೆಸರು ಪಡೆದ ಪುಟ್ಟ ಜಿಲ್ಲೆ. ಅದರಲ್ಲೂ ಜಲಸೇಚನಕ್ಕಾಗಿ ಹಿರಿಯ ತಲೆಮಾರಿನವರು ಅಲ್ಲಲ್ಲಿ ಬಾವಿ, ಸುರಂಗಗಳನ್ನು ಬಳಸುತ್ತಿದ್ದರು. ಈ ಪೈಕಿ ಸುರಂಗಗಳೇ ಹೆಚ್ಚಿರುವ ಜಿಲ್ಲೆ ಸುರಂಗಗಳ ತವರೂರೆಂದೇ ಒಂದೊಮ್ಮೆ ಖ್ಯಾತಿ ಪಡೆದಿತ್ತು. ಈಗದು ಇತಿಹಾಸ. ಆದರೂ ಅಲ್ಲಲ್ಲಿ ಈಗಲೂ ಸುರಂಗದ ಉಪಯೋಗ ಅಪೂರ್ವವೆನ್ನುವಂತಿದೆ.
ಕಯ್ಯೂರು ಕುಂಡೇನ್ ಮುಳಾದಲ್ಲಿರುವ ಕಾತ್ರ್ಯಾಯಿನಿ ಅವರ ಮನೆಯ ಬಾವಿ, ಕೃಷಿಕ ದಿ. ಚಂದನ್ ಅವರ ಮನಸ್ಸಿಗೆ ಬಂದ ಕಲ್ಪನೆಗೆ ಇದೀಗ ಜೀವಕಳೆ ಮೂಡುತ್ತಿದೆ. ಬೆಟ್ಟದ ತುದಿಯಲ್ಲಿ ನಿರ್ಮಿಸಲಾದ ಬಾವಿಯಿಂದ ನೀರು ಸೆಳೆಯುವುದು ಕಷ್ಟಕರವಾದಾಗ, ಚಂದನ್ ಮೇಲಿನ ಬಾವಿಗೆ ಸುರಂಗವನ್ನು ನಿರ್ಮಿಸಿ ನೀರು ಕೆಳಕ್ಕೆ ತರಲು ಇಳಿಯುವ ಪರ್ಯಾಯ ಕಲ್ಪನೆಯನ್ನು ತಂದರು.
50 ವರ್ಷಗಳ ಹಿಂದೆ ಚಂದನ್ ಜಾರಿಗೆ ತಂದ ಕಲ್ಪನೆಯು ಇಂದು ತನ್ನ ಮಕ್ಕಳಿಗೆ ಶುದ್ಧ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗುತ್ತಿದೆ. ಚಂದನ್ ಅವರ ಕುಟುಂಬವು ಕಯ್ಯೂರಿನ ವಲಿಯಕುನ್ನುವಿನ ಮೇಲಿರುವ ರಬ್ಬರ್ ತೋಟದ ಮೇಲ್ಭಾಗದಲ್ಲಿ ವಾಸಿಸುತ್ತಿದ್ದಾರೆ. ಅವರ ಮುಖ್ಯ ಸಮಸ್ಯೆ ಶುದ್ಧ ನೀರು. ಇದನ್ನು ಪರಿಹರಿಸಲು, ಅವರು 10 ಅಡಿ ಆಳದ ದೊಡ್ಡ ಬಾವಿಯನ್ನು ತೋಡಿದರು. ಆದರೆ ಮನೆ ವರೆಗೆ ನೀರು ತಲುಪಿಸಲು ಬಳಿಕ ಸುರಂಗ ತೋಡಿ ಯಶಸ್ವಿಯಾಯಿತು. ಮನೆಯ ಅಡುಗೆಮನೆಗೆ ಬಾವಿಯಿಂದ ಸುರಂಗ ಮಾರ್ಗ ಮಾಡುವ ಮೂಲಕ ಚಂದನ್ ತಮ್ಮ ಕಲ್ಪನೆಯನ್ನು ಯಶಸ್ವಿಗೊಳಿಸಿದರು.
50 ವರ್ಷಗಳ ಹಿಂದೆ ಚಂದನ್ ಜಾರಿಗೆ ತಂದ ಈ ಕಲ್ಪನೆಯು ಈಗ ಅವರ ಮಗಳು ಕಾತ್ರ್ಯಾಯಿನಿ ಕುಟುಂಬಕ್ಕೆ ಪ್ರಯೋಜನವನ್ನು ನೀಡುತ್ತಿದೆ. ಮಳೆಗಾಲದಂತೆಯೇ ಬೇಸಿಗೆಯಲ್ಲೂ ಮನೆಯ ಎಲ್ಲಾ ಬಳಕೆಗೆ ಸುಲಭವಾಗಿ ಬಾವಿಯಿಂದ ನೀರು ಲಭಿಸುತ್ತಿದೆ ಎಂದು ಕಾತ್ರ್ಯಾಯಿನಿ ಹೇಳುತ್ತಾರೆ.

