ಅಮರಾವತಿ: 'ವ್ಯಾಪಾರ, ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರವೂ ಸೇರಿದಂತೆ ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಭಾರತದಲ್ಲಿನ ಐರೋಪ್ಯ ಒಕ್ಕೂಟದ ರಾಯಭಾರಿ ಹರ್ವೆ ಡೆಲ್ಫಿನ್ ಅವರೊಂದಿಗೆ ಮಾತುಕತೆ ನಡೆಸಿದರು.
'ಐರೋಪ್ಯ ಒಕ್ಕೂಟ-ಭಾರತ-ಆಂಧ್ರಪ್ರದೇಶ' ನಡುವಿನ ವ್ಯಾಪಾರ ಸಹಕಾರ, ಶುದ್ಧ ಇಂಧನ, ಮೂಲಸೌಕರ್ಯ ಮತ್ತು ಹೂಡಿಕೆ ಬಗ್ಗೆ ಮಾತುಕತೆ ನಡೆಸಿದ್ದೇನೆ. ಕೈಗಾರಿಕಾ ಕಾರಿಡಾರ್ ಸ್ಥಾಪನೆ, ಬ್ಲೂ ವ್ಯಾಲಿ ಯೋಜನೆ ಒಳಗೊಂಡ ಆಂಧ್ರಪ್ರದೇಶ ಅಭಿವೃದ್ಧಿ ಮುನ್ನೋಟ-2029ರ ಬಗ್ಗೆಯೂ ಚರ್ಚಿಸಿದ್ದೇವೆ' ಎಂದು ಅವರು ಹೇಳಿದರು.
ಮಾತುಕತೆಯ ಬಳಿಕ ಡೆಲ್ಫಿನ್ ಅವರು ಚಂದ್ರಬಾಬು ನಾಯ್ಡು ಅವರೊಂದಿಗೆ ವಿಜಯವಾಡದ ಕೃಷ್ಣಾ ನದಿ ತೀರದಲ್ಲಿ ಆಯೋಜಿಸಿದ್ದ 'ಅವಕಾಯ ಸಾಂಸ್ಕೃತಿಕ ಉತ್ಸವ' ದಲ್ಲಿ ಭಾಗವಹಿಸಿದರು.

