ನ್ಯೂಯಾರ್ಕ್: ಭಾರತ ಸಂಜಾತ ಜೊಹ್ರಾನ್ ಮಮ್ದಾನಿ ಅವರು ಹೊಸ ವರ್ಷದ ಮೊದಲ ದಿನದಂದು ನ್ಯೂಯಾರ್ಕ್‌ನ 112ನೇ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಿದರು.
34 ವರ್ಷದ ಅವರು ಅಮೆರಿಕದ ಅತಿ ದೊಡ್ಡ ನಗರದ 'ಪ್ರಥಮ ಪ್ರಜೆ'ಯಾಗಿ ಅಧಿಕಾರ ವಹಿಸಿಕೊಂಡ ಮೊದಲ ಮುಸ್ಲಿಂ ಹಾಗೂ ದಕ್ಷಿಣ ಏಷ್ಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಬುಧವಾರ ಮಧ್ಯರಾತ್ರಿ ನ್ಯೂಯಾರ್ಕ್ ನಗರದಲ್ಲಿ ಹೊಸ ವರ್ಷದ ಸಂಭ್ರಮ ಆರಂಭವಾಗುತ್ತಿದ್ದಂತೆಯೇ ಓಲ್ಡ್ ಸಿಟಿ ಹಾಲ್ ಸಬ್‌ವೇ ಸ್ಟೇಷನ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಅವರು ಕುರಾನ್ ಪ್ರತಿಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದರು.
ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಪ್ರಮಾಣ ಬೋಧಿಸಿದರು. ಈ ಖಾಸಗಿ ಸಮಾರಂಭದಲ್ಲಿ ಮಮ್ದಾನಿ ಅವರ ಪತ್ನಿ ರಮಾ ದುವಾಜಿ, ಕುಟುಂಬ ಸದಸ್ಯರು ಮತ್ತು ಆಪ್ತರು ಪಾಲ್ಗೊಂಡರು.
ಮೇಯರ್ ಅವರ ಕಚೇರಿಯಿರುವ ಸಿಟಿ ಹಾಲ್ ಹೊರಗೆ ಬೃಹತ್ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಅಲ್ಲಿ ಅವರು ಎರಡನೇ ಬಾರಿಗೆ ಪದಗ್ರಹಣ ಮಾಡಲಿದ್ದಾರೆ.
ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭವು 'ನಗರದ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ ಮತ್ತು ನ್ಯೂಯಾರ್ಕ್‌ನ ಕಾರ್ಮಿಕ ವರ್ಗವನ್ನು ಮುಂಚೂಣಿಗೆ ತಂದು ನಿಲ್ಲಿಸಲಿದೆ' ಎಂದು ಮಮ್ದಾನಿ ಈ ಹಿಂದೆ ಹೇಳಿದ್ದರು.
ಜೊಹ್ರಾನ್ ಅವರು ಭಾರತದ ಸಿನಿಮಾ ನಿರ್ದೇಶಕಿ, ನಿರ್ಮಾಪಕಿ ಮೀರಾ ನಾಯರ್ ಮತ್ತು ಪ್ರೊ. ಮಹಮದ್ ಮಮ್ದಾನಿ ಅವರ ಪುತ್ರ. ಅವರು ಜನಿಸಿದ್ದು ಉಗಾಂಡಾದ ಕಂಪಾಲದಲ್ಲಿ. ಅವರಿಗೆ 7 ವರ್ಷ ಆಗಿದ್ದಾಗ ಕುಟುಂಬವು ನ್ಯೂಯಾರ್ಕ್‌ಗೆ ವಲಸೆ ಬಂದು ನೆಲಸಿತ್ತು. ಮಮ್ದಾನಿ ಅವರಿಗೆ 2018ರಲ್ಲಿ ಅಮೆರಿಕದ ಪೌರತ್ವ ಲಭಿಸಿತ್ತು.
ಮೇಯರ್ ಸ್ಥಾನಕ್ಕೆ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅವರು ನ್ಯೂಯಾರ್ಕ್‌ನ ಮಾಜಿ ಗವರ್ನರ್, ಪ್ರಭಾವಿ ರಾಜಕೀಯ ಮುಖಂಡ ಆಯಂಡ್ರ್ಯೂ ಕೌಮೊ, ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿದ್ದರು.
ಪ್ರಮುಖಾಂಶಗಳು
ನ್ಯೂಯಾರ್ಕ್‌ನ 112ನೇ ಮೇಯರ್
ಈ ಹುದ್ದೆಗೇರಿದ ದಕ್ಷಿಣ ಏಷ್ಯಾದ ಮೊದಲ ವ್ಯಕ್ತಿ
ಸಮಾರಂಭದಲ್ಲಿ ಕುಟುಂಬ ಸದಸ್ಯರು, ಆಪ್ತರು ಭಾಗಿ

