ಕಾಸರಗೋಡು: ವಿದ್ಯಾನಗರದ ಸರ್ಕಾರಿ ಕಾಲೇಜಿನಲ್ಲಿ 1973ರಲ್ಲಿ ಪದವಿ ಪೂರೈಸಿದ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಳೆದ ಆರು ವರ್ಷಗಳಿಂದ ನಿರಂತರವಾಗಿ ಒಟ್ಟು ಸೇರುತ್ತಿರುವ ಪೂರ್ವ ವಿದ್ಯಾರ್ಥಿಗಳು, ಈ ಬಾರಿ 53 ವರ್ಷಗಳ ಹಿಂದಿನ ನೆನಪನ್ನು ಮೆಲುಕು ಹಾಕಿದರು. ತಮ್ಮ ವಯೋಸಹಜ ಅಸೌಖ್ಯವನ್ನೂ ಮರೆತು, ಐದು ದಶಕಕ್ಕೂ ಹಿಂದಿನ ವಿದ್ಯಾರ್ಥಿ ಜೀವನದ ಸುಮಧುರ ನೆನಪುಗಳೊಂದಿಗೆ ಪೂರ್ವ ವಿದ್ಯಾರ್ಥಿಗಳು ಮುಖಾಮುಖಿಯಾದರು.
ದೂರದೂರಲ್ಲಿ ನೆಲೆಸಿದ್ದವರೂ ಈ ಕೂಟದಲ್ಲಿ ಭಾಗವಹಿಸಿದ್ದರು. ಭಾರತದ ರಾಷ್ಟ್ರಪತಿಗಳಿಂದ ಚಲನಚಿತ್ರ ವಿಮರ್ಶಕರ ಪ್ರಶಸ್ತಿಯನ್ನು ಗೆದ್ದ ತಮ್ಮ ಸಹಪಾಠಿ, ಹಿರಿಯ ಪತ್ರಕರ್ತ ಸುಬ್ರಹ್ಮಣ್ಯ ಬಿ.ಎನ್. ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಉಡುಪಿಯ ಯೋಗ ಶಿಕ್ಷಕ ಹಾಗೂ ಸಹಪಾಠಿ ವೇಣುಗೋಪಾಲ ಭಟ್ ಯೋಗ ತರಗತಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಎ.ಕರುಣಾಕರನ್ ನಾಯರ್, ರಘುನಾಥ್ ಸಿ.ಸಿ, ಅರವಿಂದನ್ ಎನ್.ವಿ, ಮೋಹನನ್ ನಾಯರ್ ಕೆ, ಮತ್ತು ವಿಜಯನ್ ಕೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

