ಬದಿಯಡ್ಕ: ಹೆತ್ತು ಹೊತ್ತು ಸಾಕಿ ಸಲಹಿದ ತಾಯಿ, ಬಾಲ್ಯ ಯೌವ್ವನದ ಕಾಲದಲ್ಲಿ ವಿದ್ಯೆ, ಉದ್ಯೋಗ ಎಲ್ಲವನ್ನೂ ಒದಗಿಸಿಕೊಡುವ ತಂದೆ, ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನದೆಡೆಗೆ ಒಯ್ಯಲು ವಿದ್ಯೆ ನೀಡುವ ಗುರುಗಳು ನಮ್ಮ ಕಣ್ಣಿಗೆ ಕಾಣುವ ದೇವರು. ವಿದ್ಯಾರ್ಥಿ ಜೀವನದಲ್ಲಿ ತಂದೆ, ತಾಯಿ, ಗುರುಗಳ ಆದೇಶದಂತೆ ನಡೆದಾಗ ನಮ್ಮ ಮುಂದಿರುವ ಕಲ್ಪನೆ ಸಾಕಾರಗೊಳ್ಳುತ್ತದೆ ಎಂದು ಮಂಗಳೂರು ಡ್ಯಾಶ್ ಟೆಕ್ನಿಕ್‍ನ ವೈ.ಕೇಶವ ಭಟ್ ಹೇಳಿದರು.
ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಸಂತೋತ್ಸವದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮೊಳಗಿರುವ ಪ್ರತಿಭೆಗೆ ಇಂದು ಅದಮ್ಯವಾದ ಅವಕಾಶವಿದೆ. ಡಿಜಿಟಲ್ ಯುಗದಲ್ಲಿ ನಾವು ಯಶಸ್ಸನ್ನು ಗಳಿಸಬೇಕಾಗಿದೆ. ನಾವು ಏನಾಗಬೇಕು ಎಂಬ ಕನಸನ್ನು ಗಟ್ಟಿಗೊಳಿಸುವ ಛಲವಿರಬೇಕು. ಎಲ್ಲದಕ್ಕೂ ಮೊದಲು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಒಳ್ಳೆಯ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಪ್ರತಿಕ್ಷಣವೂ ಕಲಿಯವಂತಾಗಬೇಕು ಎಂದರು.
ಹವ್ಯಕ ಅಭ್ಯುದಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ವೈ.ವಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಉಪಜಿಲ್ಲಾ ವಿದ್ಯಾಕಾರಿ ಶಶಿಧರ ಎಂ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಾಲಾ ಆಡಳಿತ ಮಂಡಳಿ ಸಂಚಾಲಕ ಜಯಪ್ರಕಾಶ್ ಪಜಿಲ, ಅಧ್ಯಕ್ಷ ಸುಬ್ರಹ್ಮಣ್ಯ ಕೆರೆಮೂಲೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅನಂತಕೃಷ್ಣ ಚಡಗ, ಉಪಾಧ್ಯಕ್ಷ ಸುಧಾಕರ ರೈ, ಮಾತೃಸಮಿತಿ ಅಧ್ಯಕ್ಷೆ ಶಾಲಿನಿ ಕೆ. ಶುಭ ಹಾರೈಸಿದರು. ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಅಂಕ ಪಡೆದ ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಬೇರ್ಕಡವು ಸೀತಾರಾಮ ಭಟ್ಟರ ಸ್ಮರಣಾರ್ಥ ಶಿವರಂಜನ್ ಬೇರ್ಕಡವು ಕೊಡಮಾಡುವ ದತ್ತಿನಿಧಿ ಸ್ವರ್ಣಾಂಕುರ ಪುರಸ್ಕಾರವನ್ನು ವಿದ್ಯಾರ್ಥಿನಿ ನಿಹಾರಿಕಾ ಪಿ. ಅವರಿಗೆ ನೀಡಲಾಯಿತು. ವಿಚಿತ್ರ ಏತಡ್ಕ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು ಇವರು ಕೊಡಮಾಡುವ ಸಾಹಿತ್ಯ ಕಲಾಕುಂಚ ಪ್ರಶಸ್ತಿ, ಬೃಂದಾವನ ಶ್ರೀಕೃಷ್ಣ ಭಟ್ ಇವರ ಸ್ಮರಣಾರ್ಥ ಕೊಡಮಾಡುವ ಬೃಂದಾವನ ಪ್ರಶಸ್ತಿ, ದಿ. ಕುಳಮರ್ವ ಶ್ಯಾಮ ಭಟ್ ಇವರು ನೀಡಿದ ದತ್ತಿನಿಧಿ ಪುರಸ್ಕಾರವನ್ನು ಅರ್ಹ ವಿದ್ಯಾರ್ಥಿಗಳು ಪಡೆದುಕೊಂಡರು. ಅಧ್ಯಾಪಿಕೆ ಸರೋಜ ಕಾನತ್ತಿಲ ವರದಿವಾಚನಗೈದರು. ವಿದ್ಯಾರ್ಥಿ ನಾಯಕ ಸ್ವಾಗತಿಸಿ, ಉಪನಾಯಕಿ ವಂದಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.
ಕೃಷ್ಣಂ ವಂದೇ ಜಗದ್ಗುರುಂ :
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು. ಪುಟ್ಟ ಬಾಲಕರಿಂದ ತೊಡಗಿ ವಯೋವೃದ್ಧರ ತನಕ ಅವರವರ ಭಾವಕ್ಕೆ ನಿಲುಕುವ ಏಕೈಕ ವ್ಯಕ್ತಿತ್ವ ಶ್ರೀಕೃಷ್ಣ. ಅಂತಹ ಶ್ರೀಕೃಷ್ಣನ ಜನನದಿಂದ ಮೊದಲ್ಗೊಂಡು ಕಂಸವಧೆಯ ತನಕ ಕಥಾಸಾರವನ್ನು ನಾಟ್ಯ, ನಾಟಕ, ಯಕ್ಷಗಾನ, ಪ್ರಹಸನ ಮೊದಲಾದ ಕಲಾಪ್ರಕಾರಗಳ ಮೂಲಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ವಸಂತೋತ್ಸವ ಎಂಬ ಹೆಸರಿನಲ್ಲಿ ಪ್ರದರ್ಶಿಸಿದರು. ಯಾವುದೇ ಧ್ವನಿ ಸುರುಳಿಯನ್ನು ಬಳಸದೆ ಏಳು ಗಂಟೆಗಳ ಕಾಲ ಹಿಮ್ಮೇಳದಲ್ಲಿಯೂ ವಿದ್ಯಾರ್ಥಿಗಳೇ ಜೊತೆಸೇರಿದ್ದರು. ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದದವರು ಪೂರ್ಣ ಪರಿಶ್ರಮದೊಂದಿಗೆ ಬೆನ್ನೆಲುಬಾಗಿ ನಿಂತರು. ಆಡಳಿತ ಸಮಿತಿಯ ಉಪಾಧ್ಯಕ್ಷ ರಾಜಗೋಪಾಲ ಚುಳ್ಳಿಕ್ಕಾನ ವಂದಿಸಿದರು.

.jpg)
.jpg)
