ಮಂಜೇಶ್ವರ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಉಪ್ಪಳ ಘಟಕದ ಎಂಟನೇ ವರ್ಷದ ವಾರ್ಷಿಕೋತ್ಸವ ಇತ್ತೀಚೆಗೆ ಕುಳೂರು ಶ್ರೀಹರಿ ಭಜನಾ ಮಂದಿರದ ವಠಾರದಲ್ಲಿ ಜರಗಿತು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪ್ಪಳ ಘಟಕದ ಗೌರವಾಧ್ಯಕ್ಷ ಪಿ.ಆರ್. ಶೆಟ್ಟಿ ಪೆÇಯ್ಯೆಲು ಕುಳೂರು ಆದ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿಕೊಂಡೆವೂರು ಮಠದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಗಳು ಮಾತನಾಡಿ, ಪಟ್ಲ ಸತೀಶ ಶೆಟ್ಟಿ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಅಶಕ್ತ ಕಲಾವಿದರ ಪಾಲಿನ ಕಾಮಧೇನುವಾಗಿ ಕಾರ್ಯವೆಸಗುತ್ತಿದೆ. ಈಗಾಗಲೇ ನೂರಾರು ಅಶಕ್ತ ಕಲಾವಿದರಿಗೆ ಮನೆ, ಧನಸಹಾಯ ನೀಡಿರುವುದು ಶ್ಲಾಘನೀಯ. ಓರ್ವ ಯಕ್ಷಗಾನ ಕಲಾವಿದ ಸೇವಾಸಂಘಟನೆಯೊಂದನ್ನು ಕಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ಹಮ್ಮಿಕೊಂಡಿರುವುದು ಚಾರಿತ್ರಿಕವಾದ ಸಾಧನೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ ್ಷಸತೀಶ ಶೆಟ್ಟಿ ಪಟ್ಲ ಮಾತನಾಡಿ, ಕಳೆದ 10 ವರ್ಷಗಳಲ್ಲಿ ಪಟ್ಲ ಫೌಂಡೇಶನ್ ಸುಮಾರು ಎಂಟು ಕೋಟಿಗೂ ಮಿಕ್ಕಿ ಅಶಕ್ತ , ಬಡ ಕಲಾವಿದರಿಗೆ ಮನೆ, ಆರೋಗ್ಯ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ನೀಡಿದೆ. ಕಳೆದ ಮೂರು ವರ್ಷಗಳಿಂದ ಯಕ್ಷ ಶಿಕ್ಷಣ ಯೋಜನೆಯಡಿ ಕರ್ನಾಟಕದ ಆಯ್ದ ಶಾಲೆಗಳಲ್ಲಿ ಉಚಿತ ಯಕ್ಷಗಾನ ತರಬೇತಿ ನೀಡುತ್ತಾ ಬಂದಿದೆ. ಸುಮಾರು ಎಂಟು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಯಕ್ಷಗಾನ ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಪೌಂಡೆಶನ್ ನ ಸೇವಾ ಚಟುವಟಿಕೆಗಳನ್ನು ತಿಳಿಸಿದರು.
ಗಡಿನಾಡಿನ ಪ್ರಸಂಗಕರ್ತ, ಹವ್ಯಾಸಿ ಪತ್ರಕರ್ತ, ಕವಿ ಯೋಗೀಶ ರಾವ್ ಚಿಗುರುಪಾದೆ ಅವರನ್ನು ಪಟ್ಲ ಫೌಂಡೇಶನ್ ಉಪ್ಪಳ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡು ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಉದ್ಯಮಿ ಮೋಹನ್ ಶೆಟ್ಟಿ ಮಜ್ಜಾರು, ಶ್ರೀಹರಿ ಭಜನಾ ಮಂದಿರದ ಸೇವಾ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ನಾೈಕ್ ನಡುಹಿತ್ಲು, ಅಧ್ಯಕ್ಷೆ ಕೃಷ್ಣವೇಣಿ ಶೆಟ್ಟಿ ಪಾದೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯಕ್ಷಧ್ರುವ ಉಪ್ಪಳ ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಗೌರವ ಉಪಸ್ಥಿತರಿದ್ದರು. ಗುರುಪ್ರಸಾದ ಹೊಳ್ಳ ತಿಂಬರ ಸ್ವಾಗತಿಸಿ, ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು. ಬಳಿಕ ಪಾವಂಜೆ ಮೇಳದವರಿಂದ ಶ್ರೀದೇವಿ ಲಲಿತೋಪಖ್ಯಾನ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.

.jpg)
