ಬೆಂಗಳೂರು: ಕಾಸರಗೋಡು ವಿಚಾರಕ್ಕೆ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ನಡುವೆ ಭಾಷಾ ಸಮರ ಭುಗಿಲೆದ್ದಿದೆ. ಕಾಸರಗೋಡು ಜಿಲ್ಲೆಯ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯಗೊಳಿಸುವ ಕೇರಳ ಮಸೂದೆಗೆ ಕರ್ನಾಟಕ ಸರ್ಕಾರದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ ಎಂಬ ಟೀಕೆಗಳು ಕೇಳಿ ಬರ್ತಿದೆ. ಕಾಸರಗೋಡು ವಿಚಾರದಲ್ಲಿ ಪದೇ ಪದೇ ಕನ್ನಡಿಗರಿಗೆ ಅನ್ಯಾಯ ಮಾಡ್ತಿರೋ ಕೇರಳ ಸರ್ಕಾರಕ್ಕೆ ಪಾಠ ಕಲಿಸಲು ಸಿದ್ದರಾಮಯ್ಯ ಮುಂದಾಗಿದ್ದು, ಕಾಸರಗೋಡು ಕನ್ನಡಿಗರ ರಕ್ಷಣೆಗೆ ಕ್ರಮತೆಗೆದುಕೊಂಡಿದ್ದಾರೆ.
ಕನ್ನಡ ವಿರೋಧಿ ಕೇರಳಕ್ಕೆ ಸಿದ್ದು ತಿರುಗೇಟು
ಕಾಸರಗೋಡಿನಲ್ಲಿ ಮಲಯಾಳಂ ಭಾಷೆ ಕಡ್ಡಾಯಗೊಳಿಸಿ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿರುವ ಕೇರಳ ಸರ್ಕಾರಕ್ಕೆ ಪಾಠ ಕಲಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಈ ಹಿನ್ನೆಲೆ ಕಾಸರಗೋಡು ಕನ್ನಡಿಗರ ರಕ್ಷಣೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಕಾಸರಗೋಡು ಕನ್ನಡ ರಾಜ್ಯೋತ್ಸವಕ್ಕೆ ಅನುದಾನ
ಕಾಸರಗೋಡಿನಲ್ಲಿನ ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಲು ಮುಂದಾಗಿದ್ದು, ಈಗಾಗಲೇ ಸಿಎಂ ಸಿದ್ದರಾಮಯ್ಯ ತಾತ್ವಿಕ ಒಪ್ಪಿಗೆ ಕೂಡ ನೀಡಿದ್ದಾರೆ.ರಾಜ್ಯ ಪ್ರಶಸ್ತಿಯಲ್ಲಿ ಕಾಸರಗೋಡು ಕನ್ನಡಿಗರನ್ನು ಪರಿಗಣಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಒಂದು ತಿಂಗಳ ಹಿಂದೆಯೇ ಸಿಎಂಗೆ ಕಾಸರಗೋಡು ಕನ್ನಡಿಗರು ಮನವಿ ನೀಡಿದ್ದರು.
'ಕರ್ನಾಟಕದ ಸಾಂಸ್ಕೃತಿಕ ಭಾಗ'
ನಾವು ಗಡಿ ವಿಚಾರದಲ್ಲಿ ಕೇರಳದಲ್ಲಿದ್ದೇವೆ. ಭಾವನಾತ್ಮಕವಾಗಿ ಕರ್ನಾಟಕದೊಂದಿಗೆ ಬೆಸೆದುಕೊಂಡಿದ್ದೇವೆ. ಹೀಗಾಗಿ ಕಾಸರಗೋಡನ್ನ ಕರ್ನಾಟಕದ ಸಾಂಸ್ಕೃತಿಕ ಭಾಗ ಎಂದು ಪರಿಗಣಿಸಲು ಮನವಿ ಮಾಡಿದ್ದರು. ಈ ಮನವಿ ಮೇರೆಗೆ ರಾಜ್ಯ ಸರ್ಕಾರ ಕಾಸರಗೂಡು ಕನ್ನಡಿಗರಿಗೆ ಗುಡ್ ನ್ಯೂಸ್ ನೀಡಲು ಮುಂದಾಗಿದೆ.
ಶೀಘ್ರವೇ ಸಿದ್ದರಾಮಯ್ಯ ಘೋಷಣೆ
ಕಾಸರಗೋಡನ್ನ ರಾಜ್ಯದ ಸಾಂಸ್ಕೃತಿಕ ಭಾಗ ಎಂದು ಪರಿಗಣಿಸಲು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದು, ಕಾಸರಗೋಡಿಗೆ ತೆರಳಿ ಅಲ್ಲೇ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.
ಕೇರಳ ಸರ್ಕಾರದ 'ಮಲಯಾಳಂ ಭಾಷಾ ಮಸೂದೆ-2025'ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾಷೆಯು ಕೇವಲ ಶೈಕ್ಷಣಿಕ ಆಯ್ಕೆಯಲ್ಲ, ಅದು ಅವರ ಅಸ್ಮಿತೆ, ಘನತೆ ಮತ್ತು ಅವಕಾಶಗಳಿಗೆ ದಾರಿಯಾಗಿದೆ. ಒಂದೇ ಭಾಷಾ ಮಾರ್ಗವನ್ನು ಕಡ್ಡಾಯಗೊಳಿಸುವ ಯಾವುದೇ ನೀತಿಯು ಮಕ್ಕಳ ಮೇಲೆ ಅನಗತ್ಯ ಹೊರೆಯಾಗುವ ಸಾಧ್ಯತೆಯಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದರು.

