ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆದ್ರಂಪಳ್ಳ ಸಮೀಪದ ಬಾಂಡಿಲು ಎಂಬಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಂಬರು ಮಿಶ್ರಣ ಕೇಂದ್ರದಿಂದ ಸ್ಥಳೀಯರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ದೂರುಗಳಿವೆ. ಡಾಂಬರು ಮಿಶ್ರಣ ಪ್ರಕ್ರಿಯೆಯಿಂದ ರಾತ್ರಿ ಹಗಲೆನ್ನದೆ ಹೊರಸೂಸುವ ದಟ್ಟವಾದ ಹೊಗೆ ಸ್ಥಳೀಯ ಪ್ರದೇಶಗಳಲ್ಲಿ ಪಸರಿಸುತ್ತಿದ್ದು ಮನೆಗಳಲ್ಲಿನ ಮಕ್ಕಳ ಸಹಿತ ಮಹಿಳೆಯರಿಗೆ ಅನಾರೋಗ್ಯ ಸಮಸ್ಯೆಗಳು ಉಲ್ಬಣವಾಗತೊಡಗಿದೆ. ಇದರ ವಿರುದ್ಧ ಸ್ಥಳೀಯರು ರಂಗಕ್ಕಿಳಿಯಲು ನಿರ್ಧರಿಸಿದ್ದಾರೆ.
ಕಳೆದ ಸುಮಾರು ಐದು ವರ್ಷಗಳ ಹಿಂದೆ ಮಲೆನಾಡು ಹೈವೆ ರಸ್ತೆ ನಿರ್ಮಾಣ ಸಂದರ್ಭ ಇಲ್ಲಿ ಸ್ಥಾಪಿತವಾದ ಈ ಡಾಂಬರು ಮಿಶ್ರಣ ಘಟಕ ಜನ ಜೀವನಕ್ಕೆ ಮಾರಕವಾಗಿ ಪರಿಣಮಿಸಿದೆ. ಇದರಿಂದಾಗಿ ಕೆಲವು ಮನೆಗಳಲ್ಲಿ ಕೆಮ್ಮು ಇನ್ನಿತರ ಆರೋಗ್ಯ ಸಮಸ್ಯೆಗಳು ಉಲ್ಬಣಗೊಂಡಿರುವುದಾಗಿ ಪರಿಸರವಾಸಿಗಳು ದೂರಿದ್ದಾರೆ. ಸಂಜೆಯಾಗುತ್ತಿದ್ದಂತೆ ಒಂದು ರೀತಿಯ ದಟ್ಟ ಹೊಗೆ ಪರಿಸರ ಪ್ರದೇಶಗಳಿಗೆ ಹರಡುತ್ತಿದೆ.
ಇದರಿಂದಾಗಿ ಪರಿಸರ ವಾಸಿಗಳು ಭೀತಿಯಿಂದಲೇ ದಿನ ಕಳೆಯುವಂತಾಗಿದೆ. ಯಾವುದೇ ಕಡಿವಾಣ ಇಲ್ಲದೆ ಇಲ್ಲಿ ಕೆಲವು ಗುತ್ತಿಗೆದಾರರ ಇಚ್ಛಾನುಸಾರ ಡಾಂಬರು ಮಿಶ್ರಣ ಕಾರ್ಯ ನಡೆಯುತ್ತಿದ್ದು ಯಂತ್ರದ ಶಬ್ದಗಳು ಕೂಡ ಇಲ್ಲಿನ ನಿವಾಸಿಗಳ ನಿದ್ದೆಗೆಡಿಸಿವೆ.
ಇಲ್ಲಿ ಮಿಶ್ರಣ ಮಾಡಿ ದೂರದ ಊರಿಗೆ ರವಾನಿಸುವ ಕಾರ್ಯ ನಡೆಯುತ್ತಿದ್ದು ಇದು ಪರಿಸರಕ್ಕೆ ಮಾರಕವಾಗಿದೆ. ಇದನ್ನು ತಡೆಗಟ್ಟಿ ಸ್ವಸ್ಥರಾಗಿ ವಾಸಿಸಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ ಇದೀಗ ಇಲ್ಲಿನ ಪರಿಸರವಾಸಿಗಳು ಒಟ್ಟಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದರೂ ಯಾವುದೇ ಕ್ರಮಕೈಗೊಳ್ಳದಿದ್ದು ಇದರ ವಿರುದ್ಧ ಪರಿಸರವಾದಿಗಳು ಹೋರಾಟಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಈ ಹಿಂದೊಮ್ಮೆ ಎಂಡೋಸಲ್ಫಾನ್ ಎಂಬ ವಿಪತ್ತು ಸಂಭವಿಸಿದ ಎಣ್ಮಕಜೆ ಪಂಚಾಯತಿಯಲ್ಲಿ ಇನ್ನೊಂದು ಮಾರಕ ಮಹಾ ದುರಂತ ಸಂಭವಿಸುವ ಮುನ್ನ ಅಧಿಕಾರಿಗಳು ಇದನ್ನು ಸ್ಥಳಾಂತರಿಸದಿದ್ದಲ್ಲಿ ನಾಡಿನ ಜನತೆ ಒಟ್ಟಾಗಿ ಇದರ ವಿರುದ್ಧ ಆಂದೋಲನಕ್ಕಿಳಿಯುವುದಾಗಿ ತಿಳಿಸಿದ್ದಾರೆ.
ಅಭಿಮತ:
-ಡಾಂಬರು ಮಿಶ್ರಣ ಕೇಂದ್ರ ನಿರ್ಮಿಸಿ ಅದರ ಉದ್ದಶದ ಕಾಲಾವಧಿ ವರ್ಷಗಳ ಹಿಂದೆಯೇ ಮುಗಿದಿದ್ದರೂ ಈಗಲೂ ಕಾರ್ಯನಿರ್ವಹಿಸುತ್ತಿದೆ. ಅಲ್ಲಿಂದ ಏಳುವ ಹೊಗೆ ವ್ಯಾಪಕ ಆರೋಗ್ಯ ಸಮಸ್ಯೆ ಸೃಷ್ಟಿಸಿದೆ. ಜೊತೆಗೆ ಸಂಜೆಯ ವೇಳೆ ಪೆಟ್ರೋಲ್ ಸುಟ್ಟ ಕಮಟು ವಾಸನೆಯೂ ವ್ಯಾಪಕ ಅಸ್ವಸ್ಥತೆ ಉಂಟುಮಾಡುತ್ತಿದೆ. ಈ ನಿಟ್ಟಿನಲ್ಲಿ ಕ್ರಿಯಾಸಮಿತಿಯೊಮದನ್ನು ರಚಿಸಿ ಪರಿಹಾರ ಕಾಣಲು ಹೋರಾಟಕ್ಕಿಳಿಯಲಾಗುವುದು.
-ರಾಜು. ಮಣಿಯಂಪಾರೆ.
ಸ್ಥಳೀಯ ನಿವಾಸಿ.

.jpg)
.jpg)
.jpg)
