ಶಬರಿಮಲೆ: ಶಬರಿಮಲೆ ದೇವಸ್ಥಾನದಲ್ಲಿ 2025-26ನೇ ಸಾಲಿನ ಮಂಡಲ-ಮಕರವಿಳಕ್ಕು ಮಹೋತ್ಸವ ಮುಕ್ತಾಯಗೊಳ್ಳುವ ಮೂಲಕ ದೇವಸ್ಥಾನದ ಗರ್ಭಗುಡಿಬಗಿಲು ಮಂಗಳವಾರ ಮುಚ್ಚಲಾಯಿತು.
ಬೆಳಿಗ್ಗೆ 5ಕ್ಕೆ ದೇವಸ್ಥಾನದ ಗರ್ಭಗುಡಿ ಬಾಗಿಲು ತೆರೆದ ನಂತರ, ಪಂದಳ ಅರಮನೆಯ ರಾಜಪ್ರತಿನಿಧಿ ಪುನರ್ಥಂನಾಳ್ ನಾರಾಯಣ ವರ್ಮ ಅವರು ಬೆಳಗ್ಗೆ ಶ್ರೀದೇವರ ದರ್ಶನ ಪೂರ್ತಿಗೊಳಿಸಿದರು.ಇದಕ್ಕೂ ಮೊದಲು ಪೂರ್ವ ಮಂಟಪದಲ್ಲಿ ಗಣಪತಿ ಹೋಮ ನೆರವೇರಿಸಲಾಯಿತು.
ಶಬರಿಮಲೆ ಶ್ರೀ ಅಯ್ಯಪ್ಪ ದೇಗುಲದ ಮುಖ್ಯ ಅರ್ಚಕ ಇ.ಡಿ.ಪ್ರಸಾದ್ ನಂಬೂದಿರಿ ಅವರು ಶ್ರೀ ಅಯ್ಯಪ್ಪನ ವಿಗ್ರಹಕ್ಕೆ ವಿಭೂತಿ ಅಭಿಷೇಕ ನೆರವೇರಿಸಿ, ಕೊರಳಿಗೆ ರುದ್ರಾಕ್ಷ ಮಾಲೆ ತೊಡಿಸಿ, ಶ್ರೀಅಯ್ಯಪ್ಪನ ವಿಗ್ರಹದ ಕೈಯಲ್ಲಿ ಯೋಗದಂಡವನ್ನಿರಿಸಿದರು. ಹರಿವರಾಸನ ಪಠಿಸಿದ ನಂತರ, ನಂದಾದೀಪ ಆರಿಸಿ, ಗರ್ಭಗುಡಿಯಿಂದ ಹೊರಗೆ ತೆರಳಿದ ನಂತರ ಬೆಳಿಗ್ಗೆ 6.45 ಕ್ಕೆ ದೇವಸ್ಥಾನದ ಗರ್ಭಗುಡಿ ಬಾಗಿಲನ್ನು ಮುಚ್ಚಲಾಯಿತು. ನಂತರ ಗರ್ಭಗುಡಿ ಬಾಗಿಲಿನ ಬೀಗದ ಗೊಂಚಲನ್ನು ರಾಜ ಪ್ರತಿನಿಧಿಗೆ ಹಸ್ತಾಂತರಿಸಿದರು.
ರಾಜಪ್ರತಿನಿಧಿ ಪವಿತ್ರ ಹದಿನೆಂಟು ಮೆಟ್ಟಿಲನ್ನು ಇಳಿದು, ಔಪಚಾರಿಕ ಸಮಾರಂಭದ ನಂತರ ದೇವಸ್ವಂ ಕಾರ್ಯನಿರ್ವಾಹಣಾಧಿಕಾರಿ ಒ.ಜಿ. ಬಿಜು ಮತ್ತು ಮುಖ್ಯ ಅರ್ಚಕ ಇ.ಡಿ ಪ್ರಸಾದ್ ನಂಬೂದಿರಿ ಅವರ ಉಪಸ್ಥಿತಿಯಲ್ಲಿ, ಶಬರಿಮಲೆ ಆಡಳಿತಾಧಿಕಾರಿ ಎಸ್. ಶ್ರೀನಿವಾಸನ್ ಅವರಿಗೆ ಕೀಲಿಕೈಗಳ ಗೊಂಚಲನ್ನು ಹಸ್ತಾಂತರಿಸಿದರು. ಈ ಸಂದರ್ಭ ಮಾಸಿಕ ಪೂಜಾ ವೆಚ್ಚಗಳಿಗಾಗಿ ಹಣಕಾಸಿನ ಭತ್ಯೆಯನ್ನು ನೀಡಿ, ರಾಜ ಪ್ರತಿನಿಧಿ ಪಂದಳಂ ಅರಮನೆಗೆ ತೆರಳುವ ಮೂಲಕ ಈ ವರ್ಷದ ಮಕರವಿಳಕ್ಕು ಮಹೋತ್ಸವಕ್ಕೆ ಸಂಭ್ರಮದ ತೆರೆ ಎಳೆಯಲಾಯಿತು.



