ಕಾಸರಗೋಡು: ವಿಧಾನಸಭಾ ಚುನಾವಣೆಗೆ ಅಗತ್ಯವಿರುವ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಜಿಲ್ಲೆಯಲ್ಲಿ ಸಿದ್ಧಗೊಳಿಸಿರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಮಾಹಿತಿ ನೀಡಿದ್ದಾರೆ. ವಿಧಾನಸಭಾ ಚುನಾವಣೆ ಜಿಲ್ಲೆಯಲ್ಲಿ ಅಗತ್ಯವಿರುವ ಎಲೆಕ್ಟ್ರಾನಿಕ್ ಮತಯಂತ್ರಗಳ ಪ್ರಾಥಮಿಕ ಪರಿಶೀಲನೆ ಪೂರ್ಣಗೊಳಿಸಲಾಗಿದ್ದು, ಹೊಸದಾಗಿ ಸ್ಥಾಪಿಸಲಾದ 158 ಮತಗಟ್ಟೆಗಳು ಸೇರಿದಂತೆ, ಮುಂಬರುವ ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ 1141 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ. 1426 ಬ್ಯಾಲೆಟ್ ಯೂನಿಟ್‍ಗಳು, 1426 ಕಂಟ್ರೋಲ್ ಯೂನಿಟ್‍ಗಳು ಮತ್ತು 1538 ವಿವಿಪ್ಯಾಟ್‍ಗಳು ಮತದಾನಕ್ಕಾಗಿ ಮೊದಲ ಹಂತದ ಪರಿಶೀಲನೆಯಲ್ಲಿ ಸಿದ್ಧಗೊಂಡಿದೆ. 14 ದಿನಗಳ ಪ್ರಾಥಮಿಕ ಪರಿಶೀಲನೆಯು 17 ರಂದು ಪೂರ್ಣಗೊಳಿಸಿ, ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಶೇ. 5 ರಷ್ಟು ಯಂತ್ರಗಳಲ್ಲಿ ಕಲ್ಪಿತ ಮತದಾನ ಪ್ರಕ್ರಿಯೆಯನ್ನೂ ಯಶಸ್ವಿಯಾಗಿ ನಡೆಸಲಾಯಿತು.
ವಿವಿಧ ರಾಜಕೀಯ ಪಕ್ಷಗಳ ನಾಯಕರಾದ ಬಿಜು ಉಣ್ಣಿತ್ತಾನ್, ಕೆ. ಸುಕುಮಾರ್, ರಾಜೀವನ್ ನಂಬಿಯಾರ್ ಮತ್ತು ಇಮ್ಯಾನ್ಯುವೆಲ್ ಉಪಸ್ಥಿತಿಯಲ್ಲಿ ಪ್ರಕ್ರಿಯೆ ನಡೆಸಲಾಯಿತು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಆಯ್ಕೆ ಮಾಡಿದ ಅಣಕು ಮತದಾನದಲ್ಲಿ, 28 ಯಂತ್ರಗಳಲ್ಲಿ 500 ಮತಗಳನ್ನು, 28 ಯಂತ್ರಗಳಲ್ಲಿ 1,000 ಮತಗಳನ್ನು ಮತ್ತು 15 ಯಂತ್ರಗಳಲ್ಲಿ 1,200 ಮತಗಳನ್ನು ಚಲಾಯಿಸುವ ಮೂಲಕ ಯಂತ್ರಗಳ ನಿಖರತೆಯನ್ನು ನಿರ್ಣಯಿಸಲಾಯಿತು. ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಎ.ಎನ್. ಗೋಪಕುಮಾರ್, ಎಫ್‍ಎಲ್‍ಸಿ ಮೇಲ್ವಿಚಾರಕ, ಎಂಡೋಸಲ್ಫಾನ್ ಸೆಲ್ ಸಹಾಯಕ ಜಿಲ್ಲಾಧಿಕಾರಿ ಲಿಪು ಎಸ್. ಲಾರೆನ್ಸ್, ಕಿರಿಯ ಸೂಪರಿಂಟೆಂಡೆಂಟ್ ಎ. ರಾಜೀವನ್, ಇವಿಎಂ ನೋಡಲ್ ಅಧಿಕಾರಿ ಹಿರಿಯ ಸೂಪರಿಂಟೆಂಡೆಂಟ್ ಕೆ. ರಾಘವನ್ ಅಣಕು ಸಮೀಕ್ಷೆಯ ನೇತೃತ್ವ ವಹಿಸಿದ್ದರು.


