ಕಾಸರಗೋಡು: ಕೇರಳ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಪ್ರಸ್ತಾಪಿತ ಮಲಯಾಳ ಭಾಷಾ ಮಸೂದೆಯಲ್ಲಿ ಮಲಯಾಳದ ಅನುಷ್ಠಾನದ ವಿಚಾರ ವ್ಯಕ್ತವಾದ ಕಡೆಗಳಲ್ಲಿ ಭಾಷಾ ಅಲ್ಪಸಂಖ್ಯಾಕರ ಹಿತವನ್ನು ಕಾಪಾಡುವ ಇನ್ನಷ್ಟು ಅಂಶಗಳನ್ನು ಸೇರಿಸುವಂತೆ ಹಾಗೂ ಪ್ರಸ್ತಾಪಿತ ವಿಷಯಗಳನ್ನು ಸ್ಪಷ್ಟಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಬಗ್ಗೆ ಕನ್ನಡಪರ ಸಂಘಟನೆಗಳು ಆಗ್ರಹಿಸಿದೆ.
ಕೇರಳ ಲೋಕಸೇವಾ ಆಯೋಗ(ಪಿ ಎಸ್ ಸಿ)ಸೇರಿದಂತೆ ಕೇರಳದಲ್ಲಿ ನಡೆಯುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆರಂಭಿಕ ( ಪ್ರವೇಶ)ಹುದ್ದೆಗಳಿಗೆ ಮಲಯಾಳ ಕಡ್ಡಾಯ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ಕನ್ನಡಿಗರಿಗೆ ವಿನಾಯಿತಿ ( ಮಲಯಾಳದ ಬದಲು ಅವರ ಭಾಷೆಯಲ್ಲಿ ಪ್ರಶ್ನೆಗಳಿರಬೇಕು ಹಾಗೂ ಅವರ ಭಾಷೆಯಲ್ಲಿ ಉತ್ತರಿಸಲು ಅವಕಾಶವಿರಬೇಕು)ನೀಡಬೇ, ಭಾಷಾ ಅಲ್ಪಸಂಖ್ಯಾಕರ ಶಾಲೆಗಳಲ್ಲಿ ಮಲಯಾಳವನ್ನು ಕಲಿಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂಬ ಕಡೆ ಭಾಷಾ ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ಮಲಯಾಳ ಕಲಿಕೆ ಐಚ್ಚಿಕವೇ ಹೊರತು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಬೇಕು, ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಎಲ್ಲ ವಿಧದ ನಾಮಫಲಕ, ಸೂಚನಾಫಲಕ, ಪ್ರಕಟಣೆ, ಅರ್ಜಿನಮೂನೆ ಮೊದಲಾದವುಗಳು ಕನ್ನಡ ಭಾಷೆಗಳಲ್ಲೂ ಇರಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಬೇಕು, ಭಾಷಾ ಅಲ್ಪಸಂಖ್ಯಾಕ ಕನ್ನಡ ಯಾ ತಮಿಳು ಮಾಧ್ಯಮ ತರಗತಿಗಳಲ್ಲಿ ಕೋರ್ ಸಬ್ಜೆಕ್ಟ್ ಭಾಷಾ ವಿಷಯಗಳು ಕಲೆ, ಕ್ರೀಡಾವಿಷಯಗಳ ಸಹಿತ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಯಾವುದೇ ವಿಷಯವನ್ನು ಬೋಧಿಸಲು ನಿಯುಕ್ತರಾಗುವ ಶಿಕ್ಷಕರು ಕನಿಷ್ಠಪಕ್ಷ ಹತ್ತನೇ ತರಗತಿಯ ವರೆಗೆ ಅಲ್ಪಸಂಖ್ಯಾತ ಭಾಷೆಗಳನ್ನು ( ಕನ್ನಡ ಯಾ ತಮಿಳು) ಒಂದು ಭಾಷಾ ವಿಷಯವಾದರೂ ಕಲಿತಿರಬೇಕು ಎಂಬ ನಿಬಂಧನೆಯನ್ನು ಭಾಷಾಮಸೂದೆಯಲ್ಲಿ ತಿದ್ದುಪಡಿ ಸಂದರ್ಭ ಸೇರ್ಪಡೆಗೊಳಿಸುವಂತೆ ಕನ್ನಡ ಸಂಘಟನೆಗಳು ಆಗ್ರಹಿಸಿದೆ.

