ಬದಿಯಡ್ಕ: ಪೆರಡಾಲ ದೇವಸ್ಥಾನಕ್ಕೆ ಸಾಗುವ ರಸ್ತೆ ದುರಸ್ತಿ ಆಗ್ರಹಿಸಿ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ವತಿಯಿಂದ ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಗ್ರಾಮಪಂಚಾಯಿತಿ ಅಧ್ಯಕ್ಷರು ದುರಸ್ತಿಗೊಳ್ಳಲಿರುವ ರಸ್ತೆಯ ಎಸ್ಟಿಮೇಟ್ ತಯಾರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದು, ಅದರಂತೆ ತಕ್ಷಣ ಎಚ್ಚೆತ್ತುಗೊಂಡ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಎಸ್ಟಿಮೇಟ್ ಸಿದ್ಧಪಡಿಸಿದರು.
ಜೀರ್ಣೋದ್ಧಾರಗೊಳ್ಳುತ್ತಾ ಬ್ರಹ್ಮಕಲಶೋತ್ಸವದ ಸನಿಹದಲ್ಲಿರುವ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಕ್ಕೆ ಸಾಗುವ ಕನ್ನೆಪ್ಪಾಡಿ - ಪೆರಡಾಲ ರಸ್ತೆ ಹಾನಿಗೊಂಡಿದ್ದು ವಾಹನ ಸಂಚಾರದುಸ್ತರವಾಗಿದೆ. 2026 ಏಪ್ರಿಲ್ ತಿಂಗಳಲ್ಲಿ ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವವು ಜರಗಲಿದೆ. ಈ ವೇಳೆ ರಸ್ತೆ ದುರಸ್ತಿಗೊಳಿಸಬೇಕೆಂಬುದು ಕ್ಷೇತ್ರಪದಾಧಿಕಾರಿಗಳ ಹಾಗೂ ಭಗವದ್ಭಕ್ತರ ಅಪೇಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಮನವಿಯನ್ನು ಸಲ್ಲಿಸಲಾಗಿತ್ತು. ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಪದಾಧಿಕಾರಿಗಳಾದ ಜಗನ್ನಾಥ ರೈ ಪೆರಡಾಲ, ಗಣೇಶ್ ಪ್ರಸಾದ ಕಡಪ್ಪು, ಜನಪ್ರತಿನಿಧಿಗಳಾದ ಬಾಲಕೃಷ್ಣ ಶೆಟ್ಟಿ ಕೆ., ಗಂಗಾಧರ ಗೋಳಿಯಡ್ಕ, ರಜನಿ ಸಂದೀಪ್, ಮಹೇಶ್ ವಳಕ್ಕುಂಜ ಜೊತೆಗಿದ್ದರು.
ಗ್ರಾಮಪಂಚಾಯಿತಿ ಅಧ್ಯಕ್ಷರ ಸೂಚನೆಯಂತೆ ದುರಸ್ತಿಗೊಳ್ಳಲಿರುವ ರಸ್ತೆಯ ಎಸ್ಟಿಮೇಟ್ ತಯಾರಿಸಲು ಆಗಮಿಸಿದ ಅಧಿಕಾರಿಗಳ ಜೊತೆ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಗ್ರಾಮಪಂಚಾಯಿತಿ ಸದಸ್ಯೆ ಬಿಂದ್ಯಾ ಕಾರ್ತಿಕ್, ಅವಿನಾಶ್ ರೈ ಮೊದಲಾದವರಿದ್ದರು.
ಅಭಿಮತ:
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ರಸ್ತೆಯು ತೀರಾ ಹದಗೆಟ್ಟಿದ್ದು ಜನಸಂಚಾರಕ್ಕೆ ಅಯೋಗ್ಯವಾಗಿದೆ. ಇದನ್ನು ಕೂಡಲೇ ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಆದಷ್ಟು ಬೇಗನೆ ದಾಖಲೆಗಳನ್ನು ಸಿದ್ಧಪಡಿಸಿ ತಾಂತ್ರಿಕ ಅನುಮತಿ ಪಡೆದು ರಸ್ತೆಯನ್ನು ಸಂಚಾರಯೋಗ್ಯವನ್ನಾಗಿಸಲಾಗುವುದು.
- ಶಂಕರ ಡಿ., ಗ್ರಾಮಪಂಚಾಯಿತಿ ಅಧ್ಯಕ್ಷ


.jpg)
