ಡಿಬ್ರುಗಢ: ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ನಿವಾಸದಲ್ಲಿ ನಡೆದ ಸತ್ಕಾರಕೂಟದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅಸ್ಸಾಂನ ಸಾಂಪ್ರದಾಯಿಕ ವಸ್ತ್ರ 'ಗಾಮೋಸಾ' (ಸ್ಕಾರ್ಫ್) ಧರಿಸದೆ ಈಶಾನ್ಯ ರಾಜ್ಯಗಳ ಸಂಸ್ಕೃತಿಗೆ ಅಗೌರವ ತೋರಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ವಿದೇಶಿ ಗಣ್ಯರು ಸೇರಿದಂತೆ ರಾಷ್ಟ್ರಪತಿ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಅತಿಥಿಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 'ಗಾಮೋಸಾ' ನೀಡಿದ್ದರು. ಕೈಮಗ್ಗದಲ್ಲಿ ನೇಯ್ದ ಗಾಮೋಸಾ ಅಸ್ಸಾಂನ ಸಂಸ್ಕೃತಿಯ ಸಂಕೇತವಾಗಿದೆ. ಆದರೆ, ಅತಿಥಿಗಳಲ್ಲಿ ರಾಹುಲ್ ಮಾತ್ರ ಇದನ್ನು ಧರಿಸಲು ನಿರಾಕರಿಸಿದರು ಎಂದು ಶುಕ್ರವಾರ ಇಲ್ಲಿನ ಖಾನಿಕರ್ ಕವಾಯತು ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಮಿತ್ ಶಾ ಹೇಳಿದರು.
'ರಾಹುಲ್ ಗಾಂಧಿ ತಮ್ಮ ಮನಬಂದಂತೆ ಮಾಡಬಹುದು. ಆದರೆ, ಎಲ್ಲಿಯವರೆಗೆ ಬಿಜೆಪಿ ಅಧಿಕಾರದಲ್ಲಿ ಇರುತ್ತದೆಯೋ ಅಲ್ಲಿಯವರೆಗೆ, ಈಶಾನ್ಯ ಸಂಸ್ಕೃತಿಗೆ ಅಗೌರವ ತೋರುವುದನ್ನು ಸಹಿಸುವುದಿಲ್ಲ' ಎಂದರು.
'ಬಂದೂಕುಗಳು, ಗುಂಡುಗಳು, ಸಂಘರ್ಷಗಳು, ಯುವಕರ ಸಾವನ್ನು ಹೊರತುಪಡಿಸಿ ಅಸ್ಸಾಂನ ಅಭಿವೃದ್ಧಿಗೆ ಕಾಂಗ್ರೆಸ್ ಯಾವುದೇ ಕೊಡುಗೆ ನೀಡಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಒಳನುಸುಳುವಿಕೆಯನ್ನು ಮತಬ್ಯಾಂಕ್ ರಾಜಕಾರಣದ ಅಸ್ತ್ರವಾಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ' ಎಂದು ಶಾ ಆರೋಪಿಸಿದರು.

