ಮುಳ್ಳೇರಿಯ: ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯ ಒಂದು ಭಾಗದಲ್ಲಿ ಸ್ಥಳವನ್ನು ಸ್ವಾಧೀನಪಡಿಸಿ ನಿರ್ಮಿಸಿದ ತಂತಿ ಬೇಲಿ ಹಾಗೂ ಕಾಂಕ್ರೀಟ್ ಪಿಲ್ಲರ್‍ಗಳನ್ನು ವಿದ್ಯಾರ್ಥಿಗಳು ಹಾಗೂ ನಾಗರಿಕರು ಸೇರಿ ನಾಶಗೊಳಿಸಿದ್ದಾರೆ. 1947 ಆಗಸ್ಟ್ 15 ರಂದು ಸ್ಥಳೀಯ ನಿವಾಸಿಯಾದ ಸುಬ್ರಹ್ಮಣ್ಯ ಎಂಬವರು ಪ್ರಸ್ತುತ ಸ್ಥಳವನ್ನು ಶಾಲೆ ನಿರ್ಮಿಸಲು ಸರ್ಕಾರಕ್ಕೆ ನೀಡಿದ್ದರೆಂದು ಹೇಳಲಾಗುತ್ತಿದೆ. ಪ್ರಸ್ತುತ ಸ್ಥಳದಲ್ಲಿ ಶಾಲಾ ಕಟ್ಟಡಗಳನ್ನು ನಿರ್ಮಿಸಿ ತರಗತಿಗಳನ್ನು ನಡೆಸಲಾಗುತ್ತಿದೆ.
ಈ ಮಧ್ಯೆ ಸ್ಥಳದ ಮಧ್ಯದಲ್ಲಾಗಿ ರಸ್ತೆ ನಿರ್ಮಿಸಲಾಗಿದೆ. ಶಾಲೆಯ ಕಿಂಡರ್‍ಗಾರ್ಟನ್ ವಿಭಾಗದಿಂದ ಎಲ್‍ಪಿ, ಯುಪಿ ವಿಭಾಗ ಹಾಗೂ ಅಡುಗೆ ಕೊಠಡಿ, ಶಾಲಾ ಮೈದಾನ ಒಂದು ಭಾಗದಲ್ಲಿ ಹಾಗೂ ಹೈಸ್ಕೂಲ್ ವಿಭಾಗ ಮತ್ತೊಂದು ಭಾಗದಲ್ಲಿದೆ. ಭಾನುವಾರ ಸಂಜೆ ಸ್ಥಳವನ್ನು ಅಳತೆ ಮಾಡಿ ಕಾಂಕ್ರೀಟ್ ಕಂಬ ನಿರ್ಮಿಸಿ ಅದಕ್ಕೆ ತಂತಿ ಬೇಲಿ ನಿರ್ಮಿಸಲಾಗಿತ್ತು. ಸೋಮವಾರ ಕ್ರೀಡಾ ತರಬೇತಿ ಸಮಯದಲ್ಲಿ ವಿದ್ಯಾರ್ಥಿಗಳು ಬೇಲಿ ಹಾಗೂ ಕಾಂಕ್ರೀಟ್ ಕಂಬಗಳನ್ನು ನಾಶಗೊಳಿಸಿದ್ದಾರೆ. ಶಾಲೆಗೆ ಕೊಡುಗೆಯಾಗಿ ನೀಡಿದ ಸ್ಥಳಕ್ಕಿಂತ ಹೆಚ್ಚು ಸ್ಥಳ ಶಾಲೆಗಾಗಿ ಸ್ವಾಧೀನಪಡಿಲಾಗಿದೆ ಎಂದು ಆರೋಪಿಸಿ ಸ್ಥಳದ ಮಾಲಕರ ಮಕ್ಕಳು ಕಾನೂನು ಕ್ರಮ ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಸ್ಥಳದ ಮಾಲಕರಿಗೆ ಅನುಕೂಲವಾಗಿ ತೀರ್ಪು ಬಂದಿದೆ ಎಂದೂ, ತೀರ್ಪಿನ ಪ್ರತಿಯನ್ನು ಪೋಲೀಸರಿಗೆ ನೀಡಲಾಗಿದೆ ಎಂದು ಸ್ಥಳದ ಮಾಲಕರು ತಿಳಿಸಿದ್ದಾರೆ. ಆದರೆ ಅಂತಹ ತೀರ್ಪು ಜಿಲ್ಲಾ ಪಂಚಾಯತಿ, ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಥವಾ ಶಿಕ್ಷಣ ಇಲಾಖೆಗೂ ನಿನ್ನೆ ವರೆಗೆ ಲಭಿಸಿಲ್ಲವೆಂದು ಹೇಳಲಾಗುತ್ತಿದೆ.
ಈ ವಿವಾದ ಸ್ಥಳದಲ್ಲಿ ಅಲ್ಪ ಅಶಾಂತಿ ಸೃಷ್ಟಿಯಾಗಿದೆ. ಖಾಸಗಿ ಸ್ಥಳವನ್ನು ಶಾಲೆಗೆ ಕೊಡುಗೆಯಾಗಿ ನೀಡಿ ಶಿಕ್ಷಣ ಇಲಾಖೆ ಅದನ್ನು ವಹಿಸಿಕೊಂಡು ಕಟ್ಟಡವನ್ನು ನಿರ್ಮಿಸುವುದರ ಮೊದಲು ಸ್ಥಳದ ಮಾಲಕತ್ವವನ್ನು ರಾಜ್ಯಪಾಲರ ಹೆಸರಲ್ಲಿ ಸರ್ಕಾರ ನೋಂದಾಯಿಸಿ ಪಡೆದುಕೊಳ್ಳಬೇಕಾಗಿತ್ತೆಂದು ಕಾನೂನು ತಜ್ಞರು ಹೇಳುತ್ತಿದ್ದಾರೆ. ಹಾಗೆ ಮಾಡಿದ್ದಲ್ಲಿ ದಾಖಲುಪತ್ರದಲ್ಲಿ ಒಳಗೊಂಡ ಸ್ಥಳದ ಮೇಲೆ ಸರ್ಕಾರಕ್ಕೆ ಹಕ್ಕಿದೆ ಎಂದೂ ಇಲ್ಲದಿದ್ದಲ್ಲಿ ಸ್ಥಳದ ಮಾಲಕತ್ವ ಅದರ ಮಾಲಕನಿಗಾಗಿರುವುದೆಂದು ಅವರು ತಿಳಿಸಿದ್ದಾರೆ.


