ಕಾಸರಗೋಡು: ಗಡಿನಾಡಿನಲ್ಲಿ ಕನ್ನಡ ಕಟ್ಟುವ ಕಾಯಕದಲ್ಲಿ ನಿರತರಾದವರನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಮಾಡುವ ಮೂಲಕ ಇಲ್ಲಿನ ಕನ್ನಡಿಗರ ನೊಂದ ಮನಸ್ಸಿಗೆ ಸಾಂತ್ವನ ಲಭಿಸಲು ಸಾಧ್ಯ ಎಂಬುದಾಗಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಸ್ಥಾಪಕ ಸಂಚಾಲಕ ಡಾ ಎಂ.ಜಿ.ಆರ್ ಅರಸ್ ತಿಳಿಸಿದ್ದಾರೆ.
ಅವರು ನಗರದ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ, ನಾಡು-ನುಡಿ ಹಬ್ಬ, ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಮುಂತಾದ ಧೀಮಂತ ಸಾಹಿತಿಗಳಿಗೆ ಜನ್ಮ ನಿಡಿದ ಕನ್ನಡದ ಗಂಡುನೆಲ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕøತಿಗೆ ಧಕ್ಕೆಯಾಗುವುದನ್ನು ಸಹಿಸಲಾಗದು. ಕನ್ನಡ ಭಾಷೆಯ ಮೇಲಿನ ದಬ್ಬಾಳಿಕೆ ವಿರುದ್ಧ ಹೋರಾಡುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ಕೆ ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಖಂಡ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ ದೀಪ ಪ್ರಜ್ವಲನೆಗೈದರು. ಸಾಹಿತಿ, ಜನಪ್ರತಿನಿಧಿ ಆಯಿಷಾ ಪೆರ್ಲ ದಿಕ್ಸೂಚಿ ಭಾಷಣ ಮಾಡಿದರು. ಶಿಕ್ಷಣ ತಜ್ಞ ವಿ ಬಿ ಕುಳಮರ್ವ, ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯ್ಯಕಟ್ಟೆ, ಸಾಹಿತಿಗಳಾದ ಜಯಾನಂದ ಪೆರಾಜೆ, ಕಾಸರಗೋಡು ಜಿಲ್ಲಾ ಕನ್ನಡ ಮಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಡಾ. ರತ್ನಾ ಹಾಲಪ್ಪ ಗೌಡ, ಕನ್ನಡ ಭವನ ಕೋಶಾಧಿಕಾರಿ ಸಂಧ್ಯಾರಾಣಿ ಟೀಚರ್, ಮೊದಲಾದವರು ಉಪಸ್ಥಿತರಿದ್ದರು. ಡಾ. ಸುರೇಶ್ ನೆಗಳಗುಳಿ ಅವರು ಕನ್ನಡದ ಧ್ವಜಾರೋಹಣ ನಡೆಸಿದರು.
ಡಾ. ಎಂ. ಜಿ. ಆರ್ ಅರಸ್ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ, ಡಾ. ರತ್ನಾ ಹಾಲಪ್ಪ ಗೌಡ ಅವರು ಕನ್ನಡ ಭುವನೇಶ್ವರೀ ದೇವಿಯ ಭಾವಚಿತ್ರಕ್ಕೆ, ಡಾ. ಜಯಪ್ರಕಾಶ್ ನಾರಾಯಣ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಹಾರಾರ್ಪಣೆಗೈದರು. ವಿರಾಜ್ ಅಡೂರು ಸ್ವಾಗತಿಸಿದರು. ವಿಶಾಲಾಕ್ಷ ಪುತ್ರಕಳ, ಪ್ರದೀಪ್ ಬೇಕಲ್, ಜಗನ್ನಾಥ ಪಿ.ಕೆ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಕನ್ನಡದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗುರುರಾಜ್ ಕಾಸರಗೋಡು ಸಾರಥ್ಯದ ಗಡಿನಾಡ ಸಾಂಸ್ಕøತಿಕ ಕಲಾ ವೇದಿಕೆಯ ಸದಸ್ಯರಿಂದ ನೃತ್ಯ ವೈಭವ, ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಸದಸ್ಯರಿಂದ ಯಕ್ಷಗುರು ಬಾಯಾರು ಸೂರ್ಯನಾರಾಯಣ ಪದಕಣ್ಣಾಯರ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ನಡೆಯಿತು.
ಪ್ರಶಸ್ತಿಗೆ ಆಯ್ಕೆ:
ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ಚಟುವಟಿಕೆಯಲ್ಲಿ ನಿರತರಗಿರುವ ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ಕೆ ವಾಮನ್ ರಾವ್ ಬೇಕಲ್ ಅವರನ್ನು ಈ ಬಾರಿಯ ಡಿ. ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆ ಮಾಡಲಾಗಿರುವುದು ಸಂತಸದ ವಿಚಾರ. ಇವರಿಂದ ಕನ್ನಡದ ಕೈಂಕರ್ಯ ಮತ್ತಷ್ಟು ನಡೆಸುವಲ್ಲಿ ಪ್ರಶಸ್ತಿ ಸಹಾಯಕವಾಗಲಿ ಎಂದು ಎಂ.ಜಿಆರ್ ಅರಸು ತಿಳಿಸಿದರು.



