ಕುಂಬಳೆ: ಅಂತಾರಾಜ್ಯ ಮದ್ಯ ಸಾಗಾಟಗಾರ ಹೊನ್ನಾವರ ಬಜಾರ್ ನಿವಾಸಿ ರಾಧಾಕೃಷ್ಣ ಎಸ್. ಕಮ್ಮತ್(61)ಎಂಬಾತನನ್ನು ಕುಂಬಳೆ ಅಬಕಾರಿ ರೇಂಜ್ ಅಧಿಕಾರಿಗಳು ಬಂಧಿಸಿದ್ದಾರೆ. ಈತನ ವಿರುದ್ಧ ಅನಧಿಕೃತ ಮದ್ಯ ಸಾಗಾಟಕ್ಕೆ ಸಂಬಂಧಿಸಿ ಗೋವಾ, ಕರ್ನಾಟಕ ಸೇರಿದಂತೆ ವಿವಿಧೆಡೆ ಕೇಸು ದಾಖಲಾಗಿದೆ.
ಮಂಜೇಶ್ವರ ಅಬಕಾರಿ ಚೆಕ್‍ಪೋಸ್ಟ್‍ನಲ್ಲಿ ಗೋವಾ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಂಡ ಪ್ರಕರಣದಲ್ಲಿ ರಾಧಾಕೃಷ್ಣ ಎಸ್. ಕಮ್ಮತ್ ವಾರಂಟ್ ಆರೋಪಿಯಾಗಿದ್ದಾನೆ. ಈತನ ಪತ್ತೆಗಾಗಿ ಅಬಕಾರಿ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವ ಮಧ್ಯೆ, ಈತ ಹೊನ್ನಾವರದ ಬಜಾರ್ ರಸ್ತೆಯಲ್ಲಿರುವ ತನ್ನ ಮನೆಗೆ ಆಗಮಿಸಿರುವ ಬಗ್ಗೆ ಮಾಹಿತಿ ಪಡೆದ ಕುಂಬಳೆ ಅಬಕಾರಿ ರೇಂಜ್ ಇನ್ಸ್‍ಪೆಕ್ಟರ್ ಶ್ರವಣ್ ಕೆ.ವಿ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದೆ. ಆರೋಪಿಯನ್ನು ಕಾಸರಗೋಡಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆ. 11ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

