ಬದಿಯಡ್ಕ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಬಲಿವಾಡು ಕೂಟ ಜರುಗಿತು. ಜೀರ್ಣೋದ್ಧಾರದ ಹಂತದಲ್ಲಿರುವ ದೇವಾಲಯದ ಗರ್ಭಗುಡಿಯ ಶಿಲೆಕಲ್ಲಿನ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಮೇಲ್ಚಾವಣಿಯ ದಾರು ಶಿಲ್ಪದ ಕೆತ್ತನೆ ಪ್ರಗತಿಯಲ್ಲಿದೆ. ಜೊತೆಗೆ ತಾಮ್ರದ ತಗಡು ಅಳವಡಿಸುವ ಕಾರ್ಯ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಸುತ್ತುಗೋಪುರ ಸಹಿತ ಉಳಿದಿರುವ ಎಲ್ಲಾ ಜೀರ್ಣೋದ್ಧಾರ ಕಾರ್ಯಗಳಿಗೆ ಬೇಕಾದ ನಿಧಿ ಸಂಗ್ರಹ ಕಾರ್ಯವನ್ನು ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಪುರುಷೋತ್ತಮ ಪುಣಿಂಚಿತ್ತಾಯ ನೀರ್ಮಜೆ ದೇಣಿಗೆ ನೀಡುವ ಮೂಲಕ ಉದ್ಘಾಟಿಸಿದರು.
ಬಳಿಕ ದಾನಿಗಳಿಂದ ದೇಣಿಗೆ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ತಹಶೀಲ್ದಾರ್ ಪುರುಷೋತ್ತಮ ಅವರನ್ನು ಶಾಲು ಹೊದಿಸಿ ಫಲ ಕಾಣಿಕೆ ಸಹಿತ ಸ್ಮರಣಿಕೆ ನೀಡಿ ಗೌರವಿಸಿ ಅಭಿನಂದಿಸಲಾಯಿತು. ಕ್ಷೇತ್ರಕ್ಕೆ ಸಂಬಂಸಿದ ಭೂಮಿಯ ಸರ್ವೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಗಡಿನಿರ್ಣಯಿಸಿ ತಮ್ಮ ಅಮೂಲ್ಯ ಸಮಯವನ್ನು ನೀಡಿ ಸಹಕರಿಸಿರುವ ಕಾರ್ಯವನ್ನು ಶ್ಲಾಘಿಸಿ ಕೃತಜ್ಞತೆ ಸೂಚಿಸಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುನಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯನ್ ಸಿ ಎಚ್,ಶ್ರೀ ಗೋಪಾಲನ್ ಅರ್ಲಡ್ಕ, ರವಿಶಂಕರ್ ಪುಣಿಂಚಿತ್ತಾಯ, ಕೃಷ್ಣರಾಜ ಪುಣಿಂಚತ್ತಾಯ, ಶಶಿಧರನ್, ಶಿಲ್ಪಿ ಎನ್.ಕೆ. ಮಾಧವನ್ ಉಪಸ್ಥಿತರಿದ್ದರು. ಸೀತಾರತ್ನ ಪುಂಡೂರು ಕರೋಡಿ ಅವರಿಂದ ಪ್ರಾರ್ಥನೆ ರತ್ನಾಕರ ಆಳ್ವ ವಂದಿಸಿದರು. ಶ್ರೀಕೃಷ್ಣೋಜಿ ರಾವ್ ಮಾಸ್ತರ್ ಕಾರ್ಯಕ್ರಮವನ್ನು ನಿರೂಪಿಸಿದರು.

.jpg)
