ಆಯುರ್ವೇದಿಕ್ ನರ್ಸಿಂಗ್ ತರಬೇತಿ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ನೇಮಕಗೊಳಿಸಬೇಕೆಂಬ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಬದಿಗೊತ್ತಿದ ರಾಜೇಶ್ ಬಿಂದಾಲ್ ಹಾಗೂ ಮನಮೋಹನ್ ಅವರನ್ನೊಳಗೊಂಡ ನ್ಯಾಯಪೀಠವು ಉತ್ತರಪ್ರದೇಶ ಸರಕಾರದ ನಿಲುವನ್ನು ಪುರಸ್ಕರಿಸಿದೆ.
ಅಭ್ಯರ್ಥಿಗಳ ಸೀಮಿತ ಲಭ್ಯತೆ ಹಾಗೂ ಅಧಿಕ ಸಂಖ್ಯೆಯ ಹುದ್ದೆಗಳಿರುವ ಹಿನ್ನೆಲೆಯಲ್ಲಿ 20 ಸೀಟುಗಳ ಸರಕಾರಿ ಆಯುರ್ವೇದಿಕ್ ನರ್ಸಿಂಗ್ ಕೋರ್ಸ್ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪಡೆದವರನ್ನು ಸ್ಟಾಫ್ ನರ್ಸ್‌ಗಳಾಗಿ ನೇಮಿಸಿಕೊಳ್ಳುವ ದೀರ್ಘಕಾಲದ ಪದ್ಧತಿಯನ್ನು ಉತ್ತರಪ್ರದೇಶದಲ್ಲಿ ಅನುಸರಿಲಾಗುತ್ತಿತ್ತು. 2011ರಲ್ಲಿ ಈ ನೀತಿಯನ್ನು ಬದಲಾಯಿಸಿದ ರಾಜ್ಯ ಸರಕಾರವು ಖಾಸಗಿ ಆಯುರ್ವೇದಿಕ್ ನರ್ಸಿಂಗ್ ಕೋರ್ಸ್‌ಗಳ ವಿದ್ಯಾರ್ಥಿಗಳನ್ನು ಕೂಡಾ ಸ್ಟಾಫ್ ನರ್ಸ್ ಆಗಿ ನೇಮಿಸುವುದಕ್ಕೆ ಅನುಮತಿ ನೀಡಿತ್ತು. ಇದರ ಪರಿಣಾಮವಾಗಿ ಅರ್ಹ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿ, ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಅಗತ್ಯವುಂಟಾಗಿತ್ತು.
ಇದನ್ನು ಪ್ರಶ್ನಿಸಿದ ಅರ್ಜಿದಾರ ಅಭ್ಯರ್ಥಿಗಳು, ಸರಕಾರಿ ಶಿಕ್ಷಣ ಸಂಸ್ಥೆಗಳ ಪದವೀಧರರ ನೇಮಕಾತಿಯು ದಶಕಗಳಿಂದ ನಡೆದುಕೊಂಡು ಬಂದ ಪದ್ಧತಿಯಾಗಿರುವುದರಿಂದ, ಅಲ್ಲಿ ಶಿಕ್ಷಣ ಪಡೆದವರಿಗೆ ಸರಕಾರಿ ಉದ್ಯೋಗ ದೊರೆಯುವ 'ಸಕ್ರಮ ನಿರೀಕ್ಷೆ'ಯನ್ನು ಹುಟ್ಟುಹಾಕುತ್ತದೆ. ಅಲ್ಲದೆ ಸರಕಾರಿ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವಾಗ ಐದು ವರ್ಷಗಳ ಸೇವಾ ಬಾಂಡ್ ಅನ್ನು ಕಡ್ಡಾಯವಾಗಿ ಪಡೆಯಲಾಗುತ್ತದೆ ಎಂದವರು ವಾದಿಸಿದ್ದರು.
ಆದರೆ ಈ ವಾದಗಳನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ನೇಮಕಾತಿ ಕುರಿತ ಸಕ್ರಮ ನಿರೀಕ್ಷೆಯು ಓರ್ವನಿಗೆ ಇರುವ ಹಕ್ಕಲ್ಲವೆಂದು ಹೇಳಿದೆ. ಶಿಕ್ಷಣ ಸಂಸ್ಥೆಯಲ್ಲಿ ದಾಖಲಾಗುವಾಗ ಪಡೆದುಕೊಳ್ಳುವ ಐದು ವರ್ಷಗಳ ಕಡ್ಡಾಯ ಸೇವೆಯ ಬಾಂಡ್ ನಿಯಮವು ಸೇವೆಗೆ ಆಯ್ಕೆಯಾದ ಅಭ್ಯರ್ಥಿಗೆ ಮಾತ್ರವೇ ಅನ್ವಯಿಸುತ್ತದೆ ಹೊರತು ಅದು ನೇಮಕಾತಿಯ ಖಾತರಿಯನ್ನು ನೀಡುವುದಿಲ್ಲವೆಂದು ಸ್ಪಷ್ಟಪಡಿಸಿತು.

