ಬದಿಯಡ್ಕ: ಪಳ್ಳತ್ತಡ್ಕ- ಕಾಡಮನೆ ಪ್ರದೇಶದಲ್ಲಿ ರಸ್ತೆಯ ಹೊಂಡಬಿದ್ದ ಬೈಕ್ ನಂತರ ಚರಂಡಿಗೆ ಉರುಳಿ ಬಿದ್ದು ಕರಿಂಬಿಲ ಕೊಡ್ಯಡ್ಕ ನಿವಾಸಿ, ಬಳ್ಳಂಬೆಟ್ಟು ಶ್ರೀ ಶಾಸ್ತಾರ ಕ್ಷೇತ್ರದ ಅರ್ಚಕ ಈಶ್ವರ ಪ್ರಕಾಶ್ ಭಟ್(50) ಗಂಭೀರ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಬಳ್ಳಂಬೆಟ್ಟು ದೇವಸ್ಥಾನಕ್ಕೆ ಬೈಕಲ್ಲಿ ತೆರಳುವ ಮಧ್ಯೆ ಅಪಘಾತ ನಡೆದಿದೆ. ಬಹಳ ಹೊತ್ತಿನ ವರೆಗೂ ಅರ್ಚಕರು ದೇವಸ್ಥಾನಕ್ಕೆ ತಲುಪದ ಹಿನ್ನೆಲೆಯಲ್ಲಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಹುಡುಕಾಡುವ ಮಧ್ಯೆ ಕಾಡಮನೆ ಬಳಿ ರಸ್ತೆಯಿಂದ ಕೆಳಗೆ ಅಬೋಧಾವಸ್ಥೆಯಲ್ಲಿ ಬಿದ್ದಿದ್ದರು. ತಕ್ಷಣ ಇವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.
ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿಯ ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ರಸ್ತೆ ಶೋಚನೀಯಾವಸ್ಥೆ ಪರಿಹರಿಸುವಂತೆ ನಾಗರಿಕರ ಬೇಡಿಕೆ ನಡುವೆ ಅಪಘಾತಗಳು ಸಮಾನ್ಯವಾಗುತ್ತಿದೆ.


