ಬದಿಯಡ್ಕ: ಕುಂಬ್ಡಾಜೆ ಪಂಚಾಯಿತಿ ಮವ್ವಾರು ಅಜಿಲ ಎಂಬಲ್ಲಿ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ದಿ. ವೆಂಕಪ್ಪ ಶೆಟ್ಟಿ ಅವರ ಪತ್ನಿ ಪುಷ್ಪಲತಾ ವಿ. ಶೆಟ್ಟಿ(72) ನಿಗೂಢ ಸಾವು ಕೊಲೆಯೆಂದು ಸಂಶಯಿಸಲಾಗಿದೆ. ಮಹಿಳೆ ಸಾವು ಕೊಲೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪುಷ್ಪಲತಾ ಅವರ ಮೃತದೇಹ ಗುರುವಾರ ಪತ್ತೆಯಾಗಿದ್ದು, ಇವರ ಸಹೋದರಿ ಪುತ್ರಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ವಂಶ ಅವರ ದೂರಿನ ಮೇರೆಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಬದಿಯಡ್ಕ ಠಾಣೆ ಇನ್ಸ್‍ಪೆಕ್ಟರ್ ಎ. ಸಂತೊಷ್ ಕುಮಾರ್ ಎಸ್.ಐ ಸವ್ಯಸಾಚಿ ನೇತೃತ್ವದ ಪೊಲೀಸರ ತಮಡ ನಡೆಸಿದ ಪ್ರಾಥಮಿಕ ತಪಾಸಣೆಯಲ್ಲಿ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಮುಖದಲ್ಲಿ ಕಂಡುಬಂದಿದ್ದ ಗಾಯದ ಗುರುತು ಕೊಲೆ ಕೃತ್ಯವನ್ನು ಪುಷ್ಠೀಕರಿಸಿತ್ತು. ಮಹಿಳೆ ಸಾವಿನ ಬಗ್ಗೆ ಕುಟುಂಬದವರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೃತದೇಹ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಉನ್ನತ ಶವಮಹಜರಿಗಾಗಿ ಕಳುಹಿಸಿಕೊಡಲಾಗಿತ್ತು.
ಪುಷ್ಪಲತಾ ಅವರ ಕತ್ತಿನಲ್ಲಿದ್ದ ಕರಿಮಣಿ ಸರ ನಷ್ಟಗೊಂಡಿದ್ದು, ಉಳಿದಂತೆ ಮನೆಯೊಳಗಿ ಕಪಾಟಿನಲ್ಲಿದ್ದ ನಾಲ್ಕು ಚಿನ್ನದ ಬಳೆ, ನಗದು ಹಾಗೇ ಉಳಿದುಕೊಂಡಿತ್ತು. ಕಳ್ಳರ ಕೃತ್ಯವಾಗಿದ್ದಲ್ಲಿ, ಮನೆಯೊಳಗಿದ್ದ ನಗ, ನಗದು ಯಥಾಸ್ಥಿತಿ ಉಳಿಯುತ್ತಿರಲಿಲ್ಲ ಎಂಬುದು ನಾಗರಿಕರ ಅಭಿಪ್ರಾಯವಾಗಿದ್ದು, ತನಿಖಾಧಿಕಾರಿಗಳೂ ಇದೇ ಸಂಶಯ ವ್ಯಕ್ತಪಡಿಸಿದ್ದಾರೆ. ಪುಷ್ಪಲತಾ ಸಾವಿನ ಹಿಂದೆ ಕಳ್ಳರ ಕೈವಾಡವೆಂದು ಬಿಂಬಿಸಲು ಕರಿಮಣಿ ಸರವನ್ನು ಮಾತ್ರ ಒಯ್ದಿರುವುದಾಗಿಯೂ ಸಂಶಯಿಸಲಾಗಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಪುಷ್ಪಲತಾ ಅಜಿಲದ ಹಳೇ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದು, ಶಿಥಿಲಗೊಂಡ ಮನೆ ಮಹಡಿಗೆ ಪ್ಲಾಸ್ಟಿಕ್ ಹೊದಿಸಲಾಗಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ದಳದವರು ಭೇಟಿನೀಡಿ ತಪಾಸಣೆ ನಡೆಸಿದರು.


