ಕ್ರಾನ್ಸ್ -ಮೊಂಟಾನ : ಇಲ್ಲಿನ ಸ್ವಿಸ್ ಆಲ್ಪ್ಸ್ ರೆಸಾರ್ಟ್ ಟೌನ್‌ನ ಬಾರ್‌ನಲ್ಲಿ ಹೊಸ ವರ್ಷಾಚರಣೆ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಲವರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದಾರೆ.
'ಕಾನ್ಸ್ಟೆಲೇಷನ್ ಬಾರ್‌ನ ಒಳಗೆ ನಡೆದ ಅಗ್ನಿ ಆಕಸ್ಮಿಕಕ್ಕೆ ಕಾರಣ ತಿಳಿದುಬಂದಿಲ್ಲ.
ಆದರೆ, ದುರ್ಘಟನೆಯಲ್ಲಿ ಭಾರಿ ಸಂಖ್ಯೆಯ ಜನರು ಸಜೀವ ದಹನವಾಗಿದ್ದಾರೆ. ಸಾವಿನ ಸಂಖ್ಯೆ ನಿಖರವಾಗಿ ತಿಳಿದಿಲ್ಲ' ಎಂದು ದಕ್ಷಿಣ ಸ್ವಿಟ್ಜರ್ಲೆಂಡ್‌ನ ವಲೈಸ್ ಕ್ಯಾಂಟನ್‌ನ ಪೊಲೀಸ್ ಮುಖ್ಯಸ್ಥ ಫೆಡರಿಕ್ ಗಿಸ್ಲರ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
'ಮೃತರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಈ ಪ್ರಕ್ರಿಯೆ ಪೊರ್ಣಗೊಳ್ಳಲು ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ನಂತರವೇ ಸಾವು- ನೋವಿನ ಸಂಖ್ಯೆ ನಿಖರವಾಗಿ ತಿಳಿಯಲಿದೆ' ಎಂದು ಗಿಸ್ಲರ್ ಹೇಳಿದರು.
ಹೊರಗಿನ ದಾಳಿ ಅಲ್ಲ: 'ಅವಘಡಕ್ಕೆ ಕಾರಣ ಏನು ಎನ್ನವುದನ್ನು ಇಷ್ಟು ಬೇಗ ಹೇಳಲಾಗದು. ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ ಬಾರ್‌ನ ಒಳಗೆ ಹೋಗಲೂ ಸಾಧ್ಯವಾಗುತ್ತಿಲ್ಲ. ಖಂಡಿತ ಇದೊಂದು ಆಕಸ್ಮಿಕ ಘಟನೆ. ಹೊರಗಿನಿಂದ ನಡೆದ ದಾಳಿ ಅಲ್ಲ' ಎಂದು ವಲೈಸ್ ಕ್ಯಾಂಟನ್‌ನ ಅಟಾರ್ನಿ ಜನರಲ್ ಬಿಟ್ರೀಸ್ ಪಿಲೌಡ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಗೈ ಪಾರ್ಮೆಲಿನ್ ಸ್ವಿಟ್ಜರ್ಲೆಂಡ್ ಅಧ್ಯಕ್ಷ ಮೃತರು ಗಾಯಗೊಂಡವರು ಮತ್ತು ಅವರ ಕುಟುಂಬ ಸದಸ್ಯರ ಜತೆಗೆ ಸರ್ಕಾರ ನಿಲ್ಲಲಿದೆ. ಅಗತ್ಯವಿರುವ ಎಲ್ಲ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಸ್ವಿಸ್ ಆಲ್ಪ್ಸ್‌ನ ಹೃದಯಭಾಗದಲ್ಲಿ ಸುಮಾರು 3 ಸಾವಿರ ಮೀಟರ್ ಎತ್ತರದಲ್ಲಿರುವ ಕ್ರಾನ್ಸ್ -ಮೊಂಟಾನ ಸ್ವಿಟ್ಜರ್ಲೆಂಡ್‌ನ ಪ್ರಮುಖ ಪ್ರವಾಸಿ ತಾಣ. ಚಳಿಗಾಲದ ಪ್ರಮುಖ ಕ್ರೀಡಾ ವಿನೋದ ಕೇಂದ್ರ. ಇಲ್ಲಿ ಹೊಸ ವರ್ಷಾಚರಣೆಗೆ ಜನರು ಕಿಕ್ಕಿರಿದು ಸೇರಿದ್ದರು. ಸಂಭ್ರಮದ ಹೊನಲು ಹರಿಯುತ್ತಿದ್ದ ಈ ಪ್ರದೇಶವು ಕೆಲ ಕ್ಷಣಗಳಲ್ಲೇ ದುರಂತಕ್ಕೆ ಸಾಕ್ಷಿಯಾಯಿತು. ಅಗ್ನಿಯ ಜ್ವಾಲೆಗಳು ಧಗಧಗಿಸುತ್ತಿದ್ದಂತೆ ಜನರು ಜೀವ ಉಳಿಸಿಕೊಳ್ಳಲು ಬಾರ್ ಒಳಗಿನಿಂದ ದಿಕ್ಕಾಪಾಲಾಗಿ ಓಡಿದರು. ಕೆಲವರು ಹೊರಬರಲಾಗದೆ ಅಲ್ಲೇ ದಹನವಾದರು. ಕಾಲ್ತುಳಿತದಲ್ಲಿ ಸಿಲುಕಿ ಹಲವು ಮಂದಿ ಗಂಭೀರವಾಗಿ ಗಾಯಗೊಂಡರು. ಘಟನಾ ಸ್ಥಳದಿಂದ ಸಾಕಷ್ಟು ಜನರನ್ನು ರಕ್ಷಿಸಿ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ನೂರಾರು ಜನರು ಇದ್ದಾರೆ. ನೋಡುನೋಡುತ್ತಿದ್ದಂತೆ ಸಂಭ್ರಮದ ಸಂಜೆಯು ದುಃಸ್ವಪ್ನವಾಗಿ ಬದಲಾಯಿತು' ಎಂದು ಕ್ರಾನ್ಸ್ -ಮೊಂಟಾನದ ಪ್ರಾದೇಶಿಕ ಆಡಳಿತದ ಮುಖ್ಯಸ್ಥ ಮಥಿಯಾಸ್ ರೆನಾರ್ಡ್ ಹೇಳಿದರು.

