ಕಾಸರಗೋಡು: ಎಣ್ಮಕಜೆಯ ಸಿಪಿಎಂ ಮುಖಂಡ, ಪ್ರಸಕ್ತ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯೊಂದರ ಶಿಕ್ಷಕನೊಬ್ಬನ ಲೈಂಗಿಕ ಕಿರುಕುಳದ ಬಗ್ಗೆ ಗೃಹಿಣಿಯೊಬ್ಬರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರುನೀಡಿದ್ದು, ಇದಕ್ಕೆ ಸಂಬಂಧಿಸಿ ವಿಡಿಯೋ ಹಾಗೂ ಶಬ್ದ ಸಂದೇಶ ಒಳಗೊಂಡ ಪೆನ್‍ಡ್ರೈವನ್ನೂ ಕಳಹಿಸಿಕೊಟ್ಟಿದ್ದಾರೆ.
ಗೃಹಿಣಿ ಕಳುಹಿಸಿರುವ ದೂರಿನ ಬಗ್ಗೆ 2025 ಡಿ. 31ರಂದು ತಿರುವನಂತಪುರದ ಪೊಲೀಸ್ ಹೆಡ್‍ಕ್ವಾಟ್ರಸ್‍ನಿಂದ ಸ್ವೀಕೃತಿ ಪತ್ರವನ್ನು ಮಹಿಳೆಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೆ ದೂರಿನ ಪ್ರತಿಯನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೂ ಕಳುಹಿಸಿಕೊಡಲಾಗಿದೆ. ಸಿಪಿಎಂ ಮುಖಂಡನ ಲೈಂಗಿಕ ಕಿರುಕುಳದ ಬಗ್ಗೆ ಈ ಹಿಂದೆಯೂ ಕುಂಬಳೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರೂ, ಇದನ್ನು ದಾಖಲಿಸಿಕೊಳ್ಳದೆ ಮುಚ್ಚಿಹಾಕಿರುವುದಾಗಿಯೂ ಡಿಜಿಪಿಗೆ ಕಳುಹಿಸಿದ ದೂರಿನಲ್ಲಿ ತಿಳಿಸಲಾಗಿದೆ.
ಸಿಪಿಎಂ ಮುಖಂಡ ಕಳೆದ 30ವರ್ಷಗಳಿಂದ ತನ್ನನ್ನು ಹಿಂಬಾಲಿಸುತ್ತಿದ್ದು, ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದನೆ. ಈ ವ್ಯಕ್ತಿ ಶಿಕ್ಷಕ ವೃತ್ತಿ ನಡೆಸುತ್ತಿರುವ ಶಾಲೆಯ ಸನಿಹದ ನನ್ನ ತಾಯಿ ನಡೆಸುತ್ತಿರುವ ಅಂಗಡಿಯಲ್ಲಿ ತನ್ನನ್ನು ಪರಿಚಯಮಾಡಿಕೊಂಡ ಆರೋಪಿ, ತನ್ನೊಂದಿಗೆ ಅತ್ಯಂತ ಸಲುಗೆಯಿಂದ ವರ್ತಿಸುತ್ತಿದ್ದನು. ಈ ಮಧ್ಯೆ ತನಗೆ ವಿವಾಹ ನೆರವೇರಿದ್ದು, ಆರೋಪಿ ನಂತರವೂ ನಾನಾ ರೀತಿಯಲ್ಲಿ ಕಿರುಕುಳನೀಡುತ್ತಾ ಬಂದಿದ್ದಾನೆ. ಪತಿಯನ್ನು ತ್ಯಜಿಸಿ ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದು, ಇದಕ್ಕೆ ಸಿದ್ಧಳಾಗದಿದ್ದಲ್ಲಿ ಪತಿಯನ್ನು ಕೊಲೆಗೈಯುವುದಾಗಿಯೂ ಬೆದರಿಕೆ ಹಾಕಿದ್ದನು. ಈತನ ಕಿರುಕುಳದಿಂದ ಬೇಸತ್ತು ಕರ್ನಾಟಕಕ್ಕೆ ವಾಸಸ್ಥಳ ಬದಲಾಯಿಸಿದರೂ, ಅಲ್ಲಿಗೂ ಆಗಮಿಸಿ ತನ್ನೊಂದಿಗೆ ಬರುವಂತೆ ಪೀಡಿಸಿದ್ದಾನೆ. ಅಶ್ಲೀಲ ಚಿತ್ರಗಳನ್ನು ಮೊಬೈಲ್‍ಗೆ ವಾಟ್ಸಪ್ ಮೂಲಕ ಕಳುಹಿಸಿಕೊಡುವುದಲ್ಲದೆ, ಗೂಂಡಾಗಳ ಮೂಲಕವೂ ಬೆದರಿಕೆ ಹಾಕಲಾಗಿದೆ. ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸಿ ಹೊರಬಂದಿರುವ ಈತನಿಂದ ತನಗೆ ರಕ್ಷಣೆ ನೀಡುವಂತೆ ಡಿಜಿಪಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.



