ಮುಂಬೈ: ರಷ್ಯಾದ ತೈಲ ಆಮದಿನ ಹಿನ್ನೆಲೆಯಲ್ಲಿ ಭಾರತದಿಂದ ಆಮದಾಗುವ ಸರಕುಗಳ ಮೇಲೆ ವಿಧಿಸಿರುವ ಶೇ 25ರಷ್ಟು ಹೆಚ್ಚುವರಿ ಸುಂಕಗಳನ್ನು ತೆಗೆದುಹಾಕುವ ಸಾಧ್ಯತೆ ಇದೆ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಶುಕ್ರವಾರ ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಸರಕುಗಳ ಆಮದಿನ ಮೇಲಿನ ಸುಂಕವನ್ನು ಶೇ 50ಕ್ಕೆ ದ್ವಿಗುಣಗೊಳಿಸುವ ಮೂಲಕ ವ್ಯಾಪಾರ ಉದ್ವಿಗ್ನತೆಗೆ ನಾಂದಿ ಹಾಡಿದ್ದರು.
ಈ ಮೊದಲು ಅಮೆರಿಕವು ಭಾರತದ ಸರಕುಗಳ ಮೇಲೆ ಶೇ 25ರಷ್ಟು ಮಾತ್ರ ಸುಂಕ ವಿಧಿಸಿತ್ತು. ರಷ್ಯಾದಿಂದ ತೈಲ ಖರೀದಿ ಮುಮದುವರಿಸಿದ್ದ ಹಿನ್ನೆಲೆಯಲ್ಲಿ ದಂಡದ ರೀತಿಯಲ್ಲಿ ಇನ್ನೂ ಶೇ 25ರಷ್ಟು ದಂಡ ಹೆಚ್ಚಿಸಿತ್ತು.
'ಈಗ ರಷ್ಯಾದ ತೈಲ ಸಂಸ್ಕರಣಾ ಸಂಸ್ಥೆಗಳಿಂದ ಭಾರತದ ತೈಲ ಖರೀದಿ ಪ್ರಮಾಣ ಕುಸಿದಿದೆ. ಅದು ನಮ್ಮ ಪ್ರಯತ್ನದ ಯಶಸ್ಸಾಗಿದೆ. ಆದರೆ, ರಷ್ಯಾದ ತೈಲ ಖರೀದಿಗೆ ಭಾರತದ ಮೇಲೆ ವಿಧಿಸಿದ್ದ ಶೇ 25ರಷ್ಟು ಸುಂಕಗಳು ಇನ್ನೂ ಜಾರಿಯಲ್ಲಿವೆ. ಅವುಗಳನ್ನು ತೆಗೆದುಹಾಕಲು ಒಂದು ಮಾರ್ಗವಿದೆ ಎಂದು ನಾನು ಊಹಿಸುತ್ತೇನೆ'ಎಂದು ಬೆಸೆಂಟ್, ವಿಶ್ವ ಆರ್ಥಿಕ ವೇದಿಕೆಯಲ್ಲಿ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ರಷ್ಯಾದಿಂದ ಭಾರತದ ತೈಲ ಆಮದು ಪ್ರಮಾಣವು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಎರಡು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಒಪೆಕ್ ದೇಶಗಳಿಂದ ತೈಲ ಖರೀದಿಯು 11 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಭಾರತವು ರಷ್ಯಾದ ತೈಲ ಖರೀದಿಯನ್ನು ಕಡಿತಗೊಳಿಸದಿದ್ದರೆ ಸುಂಕಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ಟ್ರಂಪ್ ಎಚ್ಚರಿಸಿದ್ದರು. ಅದರ ಬೆನ್ನಲ್ಲೇ ಖರೀದಿಕುಸಿದಿದ್ದು, ಬೆಸೆಂಟ್ ಅವರ ಈ ಹೇಳಿಕೆ ಬಂದಿದೆ.

